ಬೆಂಗಳೂರು : ಜು. 25ಕ್ಕೆ ದೆಹಲಿಗೆ ಸಿಎಂ ಮತ್ತು ನಾನು ಭೇಟಿ ನೀಡಿ ಎಂಎಲ್ಸಿ, ನಿಗಮ ಮಂಡಳಿ ನೇಮಕಾತಿ ಬಗ್ಗೆ ಚರ್ಚಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 25 ರಂದು ದೆಹಲಿಗೆ ಹೋಗ್ತಿದ್ದೇವೆ. ಸಿಎಂ ಮತ್ತು ನಾನು ಇಬ್ಬರು ಹೋಗುತ್ತಿದ್ದೇವೆ. ಅಲ್ಲೇ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ. ಎಂಎಲ್ಸಿ ನಾಮನಿರ್ದೇಶನ, ನಿಗಮ ಮಂಡಳಿ ಆಯ್ಕೆ ಬಗ್ಗೆ ಚರ್ಚಿಸುತ್ತೇವೆ ಎಂದಿದ್ದಾರೆ.
ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದರ ಬಗ್ಗೆ ಮಾಹಿತಿ ತಿಳಿಯಬೇಕು. ಹೋಂ ಮಿನಿಸ್ಟರ್ ಹ್ಯಾಂಡಲ್ ಮಾಡ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ತನಿಖೆಗೆ ಕೊಟ್ಟಿದ್ದಾರೆ. ಅವರು ತನಿಖೆಯನ್ನು ಮಾಡ್ತಾರೆ. ಬಿಜೆಪಿಯವರು ಏನು ಬೇಕಾದರೂ ಹೇಳಲಿ. ಕೋರ್ಟ್ಗೆ ಯಾರೋ ಹೇಳಿಕೆ ಕೊಟ್ಟಿದ್ದರು. ಅದರ ಆಧಾರದ ಮೇಲೆ ತನಿಖೆ ಆಗ್ತಿದೆ. ಸತ್ಯಾಸತ್ಯತೆ ಏನು ಅನ್ನೋದು ಬರುತ್ತದೆ. ಮೀಡಿಯಾದವರು ದೊಡ್ಡದಾಗಿ ಮಾಡ್ತಿದ್ದೀರ. ನಿಮಗೂ ಗೌರವ ಕೊಡಬೇಕಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗಿಂತ ನಿಮ್ಮದೂ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಮಾತು ಗೌರವಿಸಬೇಕು. ನಿಮ್ಮ ಹಿತವಚನವನ್ನು ಕೇಳಬೇಕಲ್ಲ ಎಂದರು.