ಬೆಂಗಳೂರು: 14 ವರ್ಷದ ಹೆಣ್ಣು ಮಕ್ಕಳಿಗೆ HPV ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ 4 ಜಿಲ್ಲೆಗಳಿಗೆ ಚುಚ್ಚುಮದ್ದು ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2025-26ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯಂತೆ 14 ವರ್ಷದ ಹೆಣ್ಣು ಮಕ್ಕಳಿಗೆ HPV ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ 4 ಜಿಲ್ಲೆಗಳ 10 ತಾಲೂಕುಗಳಲ್ಲಿ KMERC ಅನುಮೋದಿಸಿರುವ ರೂ. 4.54 ಕೋಟಿಗಳ ಅನುದಾನದಲ್ಲಿ ಚುಚ್ಚು ಮದ್ದು ಕಾರ್ಯಕ್ರಮವನ್ನು ಕೈಗೊಳ್ಳಲು ಪರಿಷ್ಕೃತ ಅನುಮೋದನೆ ನೀಡಲಾಗಿದೆ.
ಅದರಂತೆ ಚುಚ್ಚುಮದ್ದು ಕಾರ್ಯಕ್ರಮಕ್ಕಾಗಿ ತುಮಕೂರು ಜಿಲ್ಲೆ- ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲೂಕುಗಳಿಗೆ ರೂ.76 ಲಕ್ಷ, ಬಳ್ಳಾರಿ ಜಿಲ್ಲೆ-ಬಳ್ಳಾರಿ, ಸಂಡೂರು ತಾಲೂಕುಗಳಿಗೆ ರೂ.1.86 ಕೋಟಿ ರೂ., ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲೂರು ತಾಲೂಕುಗಳಿಗೆ ರೂ.1.36 ಕೋಟಿ ರೂ. ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ 56 ಲಕ್ಷ ರೂ. ಅನುದಾನ ನೀಡಲಾಗಿದೆ.
HPV ಚುಚ್ಚುಮದ್ದನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ PHH Ration card ಹೊಂದಿರುವ 14 ವಯಸ್ಸಿನ ಸರ್ಕಾರಿ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಶಾಲೆಬಿಟ್ಟ ಹೆಣ್ಣುಮಕ್ಕಳಿಗೆ 2 Doseಗಳನ್ನು ನಿಗಧಿತ ಅವಧಿಯೊಳಗೆ ನೀಡುವಂತೆ ಸೂಚಿಸಲಾಗಿದೆ. ಅಗತ್ಯವಿರುವ ಚುಚ್ಚುಮದ್ದುಗಳನ್ನು KTPP ಕಾಯ್ದೆ ನಿಯಮಗಳನ್ನು ಅನುಸರಿಸಿ KSMSCL ಮುಖಾಂತರ ಸಂಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಚುಚ್ಚುಮದ್ದು ವಿಭಾಗದಿಂದ ಅನುಷ್ಠಾನಗೊಳಿಸಬೇಕು. HPV ಲಸಿಕೆಯನ್ನು The Federation of Obstetric and Gynecological Societies of India (FOGSI) ಮಾರ್ಗಸೂಚಿಗಳನ್ನಯ ನೀಡಲು ಕ್ರಮಕೈಗೊಳ್ಳವಂತೆ ಆದೇಶಿಸಿದೆ.