ಬೆಂಗಳೂರು: ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆಯನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಆದರೆ, ಜಮೀನು ನೀಡಲು ಒಪ್ಪುವ ರೈತರಿಗೆ ಹೆಚ್ಚಿನ ದರ ಹಾಗೂ ಹೆಚ್ಚಿನ ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರೈತರು ಸುಮಾರು ಮೂರುವರೆ ವರ್ಷಗಳಿಂದ (1194 ದಿನಗಳಿಂದ) ನಡೆಸುತ್ತಿದ್ದ ಪ್ರತಿಭಟನೆಗೆ ಜಯ ದೊರೆತಿದೆ. ದೇವನಹಳ್ಳಿಯಲ್ಲಿ ಏರೋಸ್ಪೇಸ್ ನಿರ್ಮಾಣಕ್ಕೆ 1771 ಎಕರೆ ಭೂಮಿ ಸ್ವಾಧೀನಕ್ಕಾಗಿ 2022ರಲ್ಲಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ ಸರ್ಕಾರ ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆಯುವುದನ್ನು ವಿರೋಧಿಸಿದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಾದ ನಂತರ ನಟ ಪ್ರಕಾಶ್ ರಾಜ್ ಅವರು ರೈತರ ಪ್ರತಿಭಟನೆಗೆ ಸಾಥ್ ನೀಡಿದ್ದರು. ಸರ್ಕಾರ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ವಶಕ್ಕೆ ಪಡೆಯಬಾರದು ಎಂದು ಆಗ್ರಹಿಸಿದ್ದರು. ಸರ್ಕಾರ ರೈತ ಮುಖಂಡರ ಜೊತೆಗೆ ಮಾತುಕತೆಗೆ ಮುಂದಾಯಿತು. ಜುಲೈ 4ರ ಮೊದಲ ಮಾತುಕತೆ ಅಪೂರ್ಣವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಮಾತುಕತೆಗೆ ದಿನ ನಿಗದಿ ಮಾಡಿತ್ತು. ವಿವಾದ ಬಗೆಹರಿಸಲು ಸಿಎಂ ಸಿದ್ದರಾಮಯ್ಯ 15 ದಿನಗಳ ಕಾಲಾವಕಾಶ ಕೋರಿದ್ದರು. ಇದರ ನಡುವೆ ರೈತರು ರೈತರು ರಾಹುಲ್ ಗಾಂಧಿ ಮಧ್ಯ ಪ್ರವೇಶಕ್ಕೂ ಆಗ್ರಹಿಸಿದ್ದರು.
ಇಂದು ವಿಧಾನಸೌದಧಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಜೊತೆ ಸಭೆ ನಡೆಸಲಾಯಿತು. ಈ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ, ದೇವನಹಳ್ಳಿ ಚನ್ನರಾಯಪಟ್ಟಣದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಜಮೀನು ಸ್ವಾಧೀನಪಡಿಸಲು ಅಧಿಸೂಚನೆ ಹೊರಡಿಸಲಾಗಿತ್ತು. ರೈತರು ಮತ್ತು ಸಂಘಟನೆಗಳು ಜಮೀನು ಕೊಡಲು ಆಗುವುದಿಲ್ಲ. ಜಮೀನಿನಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ಅದೇ ನಮ್ಮ ಮುಖ್ಯ ಕಸುಬು. ಅದೇ ಜೀವನಾಧಾರ ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಸಮೀಪ ಇರುವುದರಿಂದ ಹಾಗೂ ಗ್ರೀನ್ ಬೆಲ್ಟ್ ಆಗಿರುವುದರಿಂದ ಸ್ವಾಧೀನ ಬೇಡ ಎಂದಿದ್ದಾರೆ ಎಂದರು. ರೈತರ, ಹೋರಾಟಗಾರರ ಅಹವಾಲು ಕೇಳಿದ್ದೇವೆ. ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಕೇಳಿದ್ದೇವೆ. ಇದು ವಿಶಿಷ್ಟವಾದ ಹೋರಾಟವಾಗಿದೆ. ಐತಿಹಾಸಿಕ ಹೋರಾಟವಾಗಿದೆ. ಸರ್ಕಾರ ಸಾಧಕ, ಬಾಧಕ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರಲಾಗಿದೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು. ರೈತರು ಸ್ವಯಂ ಪ್ರೇರಿತವಾಗಿ ಕೊಡಲು ಮುಂದೆ ಬಂದರೆ ಅಂಥ ಜಮೀನನ್ನು ಒಪ್ಪಂದದ ಮೇಲೆ ತೆಗೆದುಕೊಳ್ಳುತ್ತೇವೆ. ಅದನ್ನು ಯಾರು ತಡೆಯಲು ಆಗಲ್ಲ. ಕೈಗಾರಿಕೆ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಅಂಥ ರೈತರಿಗೆ ಸೂಕ್ತ ಪಡಿಹಾರ ಕೊಡುತ್ತೇವೆ. ಅಭಿವೃದ್ಧಿ ಪಡಿಸಿದ ಜಮೀನಿನಲ್ಲಿ 50% ರೈತರಿಗೆ ಕೊಡುತ್ತೇವೆ. ಯಾರು ಕೊಡಲು ಒಪ್ಪಲ್ಲ ಅವರ ಜಮೀನುಗಳನ್ನು ಕೈ ಬಿಡುತ್ತೇವೆ. ಆ ಜಮೀನುಗಳ ಅಧಿಸೂಚನೆಯನ್ನೇ ಕೈ ಬಿಡುತ್ತೇವೆ ಎಂದು ಸ್ಪಷ್ಟಪಡಿಸಿದರು.