ಬೆಂಗಳೂರು : ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ಜಿಎಸ್ಟಿ ಕಟ್ಟುವಂತೆ ವಾಣಿಜ್ಯ ಇಲಾಖೆ ನೋಟಿಸ್ ನೀಡುತ್ತಿರುವ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ಅಂಗಡಿ ಮಾಲೀಕರು ಕಂಗಾಲಾಗಿದ್ದು, ಈ ಸಂಬಂಧ ವಾಣಿಜ್ಯ ಇಲಾಖೆಯು ಸ್ಪಷ್ಟನೆ ನೀಡಿದೆ. ಸುಮಾರು 40 ಲಕ್ಷದಿಂದ 1 ಕೋಟಿ ರೂ.ವರೆಗೆ ದಂಡ ಸಮೇತ ಜಿಎಸ್ಟಿ ಕಟ್ಟುವಂತೆ ವಾಣಿಜ್ಯ ಇಲಾಖೆ ನೋಟಿಸ್ ಕಳುಹಿಸಿದ್ದು, ಸಣ್ಣ ವ್ಯಾಪಾರಸ್ಥರು ದಿಕ್ಕು ತೋಚದಂತೆ ಆಗಿದ್ದಾರೆ. ಕಾಂಡಿಮೆಂಟ್ಸ್ ಅಂಗಡಿ, ತರಕಾರಿ ಅಂಗಡಿ, ಬೇಕರಿ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ಮೊತ್ತದ ಜಿಎಸ್ಟಿ ಪಾವತಿಸುವಂತೆ ವಾಣಿಜ್ಯ ಇಲಾಖೆ ನೋಟಿಸ್ ನೀಡಿದೆ. ಸಣ್ಣಪುಟ್ಟ ಅಂಗಡಿಗಳು ಫೋನ್ ಪೇ, ಗೂಗಲ್ ಪೇ ಹಾಗೂ ಆನ್‌ಲೈನ್ ಪೇಮೆಂಟ್ ಮೂಲಕ ವಹಿವಾಟು ನಡೆಸುತ್ತಾರೆ. ಈ ಅನ್ಲೈನ್ ಪಾವತಿಯಲ್ಲಿನ ವಹಿವಾಟು ಆಧಾರದಲ್ಲಿ ವಾಣಿಜ್ಯ ಇಲಾಖೆ ನೋಟಿಸ್ ನೀಡಲಾಗುತ್ತಿದೆ.
ಈ ಸಂಬಂಧ ವಾಣಿಜ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್ಗಳ ಬಗ್ಗೆ ವರದಿಯಾಗಿದೆ. ಜುಲೈ 1, 2017ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿದೆ. ಈ ಕಾಯ್ದೆಯ ಕಲಂ 22ರ ಅನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಳನ್ನು ಮೀರಿದರೆ ಜಿಎಸ್ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿದೆ. ಆದರೆ ತೆರಿಗೆ ಬಾಧ್ಯತೆಯು Taxable ಸರಕುಗಳು/ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ. (ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ. ಕುರುಕುಲು ತಿಂಡಿಗಳ ಮೇಲೆ 5% ತೆರಿಗೆ ಬಾದ್ಯತೆ ಇರುತ್ತದೆ) ಎಂದು ವಿವರಿಸಿದೆ.