image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಕಾಲ್ತುಳಿತಕ್ಕೆ ಪೊಲೀಸರೆ ಕಾರಣ : ಏಕಸದಸ್ಯ ತನಿಖಾ ಆಯೋಗದಿಂದ ಸಿಎಂಗೆ ವರದಿ

ಬೆಂಗಳೂರು ಕಾಲ್ತುಳಿತಕ್ಕೆ ಪೊಲೀಸರೆ ಕಾರಣ : ಏಕಸದಸ್ಯ ತನಿಖಾ ಆಯೋಗದಿಂದ ಸಿಎಂಗೆ ವರದಿ

ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನಿವೃತ್ತ ನ್ಯಾ.ಮೈಕೆಲ್ ಡಿ.ಕುನ್ಹಾ ಏಕಸದಸ್ಯ ತನಿಖಾ ಆಯೋಗ ಸಲ್ಲಿಸಿದ ವರದಿಯಲ್ಲಿ ಆರ್​​ಸಿಬಿ, ಕೆಎಸ್​​ಸಿಎ ಹಾಗೂ ಪೊಲೀಸರನ್ನು ನೇರ ಹೊಣೆಯನ್ನಾಗಿಸಲಾಗಿದೆ. ಮೈಕೆಲ್ ಡಿ.ಕುನ್ಹಾ ಅವರು ಕಾಲ್ತುಳಿತದ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದ್ದರು. ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ 11 ಮಂದಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಈ ಸಂಬಂಧ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ‌.ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವನ್ನು ಜೂನ್ 5ರಂದು ರಚಿಸಿತ್ತು.

ನ್ಯಾ.ಮೈಕೆಲ್ ಡಿ.ಕುನ್ಹಾ ಏಕ‌ಸದಸ್ಯ ತನಿಖಾ ಆಯೋಗ ಪ್ರಮುಖವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕೆಎಸ್​​ಸಿಎ, ಡಿಎನ್​ಎ, ಅರ್​​ಸಿಬಿ ಹಾಗೂ ಪೊಲೀಸರು ಹೊಣೆ ಎಂದು ಉಲ್ಲೇಖಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು ಅಸಾಧ್ಯವೆಂದು ಗೊತ್ತಿದ್ದರೂ ಕಾರ್ಯಕ್ರಮ ನಡೆಸಲಾಗಿದೆ. ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದಿಂದ ಈ ದುರಂತ ಸಂಭವಿಸಿದೆ. ವಿಜಯೋತ್ಸವಕ್ಕೆ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ವ್ಯಾಪಕ ಪೊಲೀಸ್ ನಿಯೋಜನೆ ಇರಲಿಲ್ಲ. ಲಕ್ಷಾಂತರ ಅಭಿಮಾನಿಗಳು ಆಗಮಿಸಲಿದ್ದಾರೆ ಎಂಬುದನ್ನು ಅಂದಾಜಿಸುವಲ್ಲಿ ಪೊಲೀಸರು, ಆರ್​​ಸಿಬಿ ಹಾಗೂ ಕೆಎಸ್​ಸಿಎ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.

ಕ್ರೀಡಾಂಗಣದ ಒಳಗೆ ಇದ್ದದ್ದು 79 ಪೊಲೀಸರು ಮಾತ್ರ. ಹೊರಗೆ ಅಗತ್ಯ ಪ್ರಮಾಣದ ಪೊಲೀಸರು ಇರಲಿಲ್ಲ. ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ಸಂಜೆ 3.25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ 5.30ರ ವರೆಗೆ ಪೊಲೀಸ್ ಕಮಿಷನರ್​​ಗೆ ಮಾಹಿತಿ ಇರಲಿಲ್ಲ. ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದು ಸಂಜೆ 4 ಗಂಟೆಗೆ ಎಂಬ ಕರ್ತವ್ಯ ಲೋಪಗಳ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜುಲೈ 17 ರ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ಚರ್ಚಿಸಿ ತೀರ್ಮಾನ 

ಜುಲೈ 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಕುನ್ಹಾ ಅವರ ವರದಿಯನ್ನು ಮಂಡಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕು ಹನ್ನೊಂದು ಜನ ಮೃತ ಪಟ್ಟಿದ್ದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿದ್ದ ಏಕ ವ್ಯಕ್ತಿ ಆಯೋಗವು ಇಂದು ಎರಡು ಸಂಪುಟಗಳಲ್ಲಿ ವರದಿಯಲ್ಲಿ ಸಲ್ಲಿಸಿದೆ ಎಂದರು. ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟ ನಿರ್ಧಾರ ಮಾಡಲಿದೆ ಎಂದರು. ನಾನು ವರದಿಯನ್ನು ಪೂರ್ಣವಾಗಿ ಓದಿಲ್ಲ. ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರ ಅಮಾನತ್ತನ್ನು ಸಿಎಟಿಯವರು ವಿರೋಧಿಸಿ ಆದೇಶಿಸಿರುವ ಬಗ್ಗೆ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Category
ಕರಾವಳಿ ತರಂಗಿಣಿ