ಬೆಂಗಳೂರು: ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸಬೇಕೆಂದು ಕಡ್ಡಾಯಗೊಳಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಮುಂದಿನ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಲ್ಲಿ ಒಬ್ಬರಾದ ಸಿ.ಸೋಮಶೇಖರ್, ಮತ್ತಿತರರು ಹಾಗೂ ಶಿಕ್ಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ, ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ''ಅರ್ಜಿ ಸಲ್ಲಿಕೆಯಾಗಿ ಹಲವು ದಿನಗಳಾಗಿದೆ. ಆದರೂ, ಕಳೆದ ಎರಡು ವರ್ಷಗಳಿಂದ ಸರ್ಕಾರ ಆಕ್ಷೇಪಣೆ ಸಲ್ಲಿಸಿಲ್ಲ'' ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ನ್ಯಾಯಪೀಠ, ''ಎರಡು ವರ್ಷಗಳಿಂದ ಸರ್ಕಾರ ಏನನ್ನೂ ಮಾಡಿಲ್ಲ. ಬೇಗ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ, ಮಧ್ಯಂತರ ಪರಿಹಾರ ಕೋರಿರುವ ಅರ್ಜಿಯನ್ನು ಪರಿಗಣಿಸಲಾಗುವುದು'' ಎಂದು ಮೌಖಿಕವಾಗಿ ತಿಳಿಸಿತು. ಅಲ್ಲದೆ, ಮುಂದಿನ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಕರ್ನಾಟಕ ಭಾಷಾ ಕಲಿಕಾ ಕಾಯಿದೆ, ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಬೋಧಿಸಬೇಕು ಎಂದು ಸರ್ಕಾರ ಹೇಳಿದೆ. ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಬೋಧಿಸಬೇಕು. ಕರ್ನಾಟಕ ಭಾಷಾ ಕಲಿಕಾ ಕಾಯಿದೆ 2015ರ ಸೆಕ್ಷನ್ 3, ಕರ್ನಾಟಕ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಮತ್ತು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ನಿರಪೇಕ್ಷಣಾ ಪತ್ರ ನೀಡಿಕೆ ಮತ್ತು ನಿಯಂತ್ರಣ) ನಿಯಮಗಳ 6(2)ರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಮತ್ತು ತೊಂದರೆಯಾಗುತ್ತದೆ. ಕಾಯಿದೆ ಮತ್ತು ನಿಯಮಗಳನ್ನು ಪಾಲಿಸದಿದ್ದರೆ ನಿಯಮ 6(5)ರ ಅನ್ವಯ ಶೈಕ್ಷಣಿಕ ಸಂಸ್ಥೆಗೆ ನೀಡಲಾಗಿರುವ ನಿರಪೇಕ್ಷಣಾ ಪತ್ರವನ್ನು ಹಿಂಪಡೆಯಲಾಗುತ್ತದೆ ಎಂದು ಸರ್ಕಾರ ತಿಳಿಸಿರುವುದಾಗಿ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಿವರಿಸಲಾಗಿದೆ.