ಬೆಂಗಳೂರು: ಕ್ಯಾಂಪ್ಕೊ ದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ ಪ್ರತಿಶತ 0. 48 ರಷ್ಟು ಮಾಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ. ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್‌ಕುಮಾರ್ ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿ, ಸಂಸ್ಥೆಯ ಚಟುವಟಿಕೆಗಳು, ವಾರ್ಷಿಕ ವಹಿವಾಟು ಹಾಗೂ ಯಾವ ಯಾವ ರಾಜ್ಯಗಳ ಕಾರ್ಯವ್ಯಾಪ್ತಿ ಹೊಂದಿದೆ ಎಂಬ ಮಾಹಿತಿ ಪಡೆದ ಸಚಿವರು, ಈ ಹಿಂದಿನಂತೆ ಶೇ 0. 48ರಷ್ಟು ಮಾರುಕಟ್ಟೆ ಶುಲ್ಕ ಆಕರಣೆ ಮಾಡುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಂಪ್ಕೊ ಬಹುರಾಜ್ಯ ಸಹಕಾರ ಸಂಘಗಳ ಅಧಿನಿಯಮದಡಿ ಬದಲಾವಣೆಯಾಗಿದ್ದರ ಬಗ್ಗೆ ಮಾಹಿತಿ ಪಡೆದ ಸಚಿವರು, ಕ್ಯಾಂಪ್ಕೊ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಶುಲ್ಕವನ್ನು ಈ ಮೊದಲಿನಂತೆ ಆಕರಣೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕ್ಯಾಂಪ್ಕೋ ಬಹುರಾಜ್ಯ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿ ಬರುವ ಕಾರಣ ಮೇ ತಿಂಗಳಲ್ಲಿ ಮಾರುಕಟ್ಟೆ ಶುಲ್ಕವನ್ನು ಪ್ರತಿಶತ 0.48ರಿಂದ 0. 60ಕ್ಕೆ ಹೆಚ್ಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ಸಚಿವರನ್ನು ಭೇಟಿ ಮಾಡಿದ ಅಧ್ಯಕ್ಷರ ನಿಯೋಗ ಈ ಮೊದಲಿನಂತೆ ಪ್ರತಿಶತ 0.48 ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಬೇಕು ಎಂದು ಮನವಿ ಮಾಡಿತು. ಕ್ಯಾಂಪ್ಕೊ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿಯೇ ಆರಂಭವಾಗಿದ್ದು, ಕ್ರಮೇಣ ಕೇರಳ ಸೇರಿದಂತೆ ಇತರ ರಾಜ್ಯಗಳಿಗೂ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಣೆ ಮಾಡಿದೆ. ಬಹುರಾಜ್ಯಗಳಲ್ಲಿ ಮಾರಾಟ ಘಟಕ ತೆರೆದು ರಾಷ್ಟ್ರವ್ಯಾಪಿ ವಾಣಿಜ್ಯ ಚಟುವಟಿಕೆ ಹೊಂದಿದ್ದರೂ ಮಂಗಳೂರಿನಲ್ಲಿಯೇ ನೋಂದಾಯಿತ ಕೇಂದ್ರ ಕಚೇರಿ ಹೊಂದಿದೆ. ಎಪಿಎಂಸಿಗೆ ವಾರ್ಷಿಕ ಸುಮಾರು ಒಂಭತ್ತು ಕೋಟಿ ರೂ. ಮಾರುಕಟ್ಟೆ ಶುಲ್ಕ ಪಾವತಿ ಮಾಡುತ್ತಿದೆ ಎಂದು ಅಧ್ಯಕ್ಷ ಕಿಶೋರ್‌ಕುಮಾರ್ ಸಚಿವರಿಗೆ ವಿವರಿಸಿದರು.