ಶಿವಮೊಗ್ಗ: ಜನರ ದಶಕಗಳ ಹೋರಾಟದ ಫಲವಾಗಿ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾದ ಐತಿಹಾಸಿಕ ಸೇತುವೆ ಉದ್ಘಾಟನೆಗೆ ದಿನಾಂಕ ಫಿಕ್ಸ್ ಆಗಿದೆ. "ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾದ ದೇಶದ ಎರಡನೇ ಕೇಬಲ್ ಆಧಾರಿತ ಸೇತುವೆಯು ಜುಲೈ 14ರಂದು ಉದ್ಘಾಟನೆ ಆಗಲಿದೆ" ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ತಿಳಿಸಿದ್ದು, "ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರದ ಭೂ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಹಾಗೂ ಪ್ರಹ್ಲಾದ್ ಜೋಶಿ ಅವರು ಆಗಮಿಸಲಿದ್ದಾರೆ" ಎಂದೂ ಮಾಹಿತಿ ನೀಡಿದ್ದಾರೆ.
"ಸಾಗರ ತಾಲೂಕಿನ ಹೊಳೆಬಾಗಿಲಿನಿಂದ ಕಳಸವಳ್ಳಿ ಶರಾವತಿ ಹಿನ್ನೀರಿನಲ್ಲಿ ಸುಮಾರು 2.25 ಕಿ.ಮಿ. ಉದ್ದದ ಸೇತುವೆ ಆಗಿದೆ. ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ಡರ್ಜೆಗೆ ಏರಿಸಿ ಸುಮಾರು 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆಯ ಉದ್ಘಾಟನೆ ನಡೆಯಲಿದೆ. ಸೇತುವೆ ಕಾಮಗಾರಿ ಅಲ್ಪಸ್ವಲ್ಪ ಉಳಿದಿದ್ದು, ಉದ್ಘಾಟನೆ ದಿನಾಂಕದ ಒಳಗೆ ಮುಕ್ತಾಯವಾಗಲಿದೆ. ಸೇತುವೆಗೆ ಸಿಗಂದೂರು ಚೌಡೇಶ್ವರಿ ಎಂದು ಹೆಸರಿಡುವ ಕುರಿತು ಚರ್ಚೆ ನಡೆಯುತ್ತಿದೆ.ಈ ಸೇತುವೆಯ ಸಂಪರ್ಕದಿಂದ ಉತ್ತರ ಕರ್ನಾಟಕದಿಂದ ಬಯಲು ಸೀಮೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು. "ಈ ಸೇತುವೆಯು ನಿತಿನ್ ಗಡ್ಕರಿ ಹಾಗೂ ಯಡಿಯೂರಪ್ಪನವರ ದೂರದೃಷ್ಟಿಯಿಂದ ಸೇತುವೆಗೆ ಚಾಲನೆ ನೀಡಲಾಗಿತ್ತು" ಎಂದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಜಗದೀಶ್, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕರಾದ ಹರತಾಳು ಹಾಲಪ್ಪ ಸೇರಿ ಇತರರು ಉಪಸ್ಥಿತರಿದ್ದರು.