ಬೆಂಗಳೂರು: ಉದ್ಯಮದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೇ 80 ಬಗೆಯ ಉದ್ಯೋಗಗಳಿಗೆ ಸಂಬಂಧಿಸಿದಂತೆ ಕನಿಷ್ಠ ವೇತನ ಪರಿಷ್ಕರಿಸಿ 2025ರ ಏಪ್ರಿಲ್ನಲ್ಲಿ ಹೊರಡಿಸಿರುವ ಉದ್ದೇಶಿತ ಕರಡು ಅಧಿಸೂಚನೆ ಆಧರಿಸಿ ಮುಂದೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಇತ್ತೀಚೆಗೆ ತಿಳಿಸಿದೆ. ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾಪಿಸಿ ಕಾರ್ಮಿಕ ಇಲಾಖೆ ಏಪ್ರಿಲ್ 11 ಮತ್ತು 19 ರಂದು ಹೊರಡಿಸಿರುವ ಅಧಿಸೂಚನೆಗಳನ್ನು ಪ್ರಶ್ನಿಸಿ ಶಿವಮೊಗ್ಗ-ದಾವಣಗೆರೆಯ ನಂಜಪ್ಪ ಆಸ್ಪತ್ರೆಗಳ ಆಡಳಿತಾಧಿಕಾರಿ ಎಸ್.ಸವಿತಾ, ಮತ್ತು ನಂಜಪ್ಪ ಟ್ರಸ್ಟ್ನ ಆಡಳಿತಾಧಿಕಾರಿ ಪಿ.ನಳಿನಾ ಎಂಬುವರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರಿದ್ದ ಏಕ ಸದಸ್ಯಪೀಠಕ್ಕೆ ಸರ್ಕಾರಿ ವಕೀಲರು ಈ ಮಾಹಿತಿ ನೀಡಿದರು.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, 80 ನಿರ್ದಿಷ್ಟ ಉದ್ಯೋಗಗಳಲ್ಲಿ ಕನಿಷ್ಠ ವೇತನ ಪರಿಷ್ಕರಣೆಗಾಗಿ ಪ್ರಸ್ತಾವಿತ ಕರಡು ಅಧಿಸೂಚನೆಗಳ ಕುರಿತು ಸಂಬಂಧಪಟ್ಟ ಉದ್ಯಮದ ಪ್ರತಿನಿಧಿಗಳೊಂದಿಗೆ ಸಭೆಗಳು/ಚರ್ಚೆಗಳನ್ನು ನಡೆಸದ ಹೊರತು ಸರ್ಕಾರ ಯಾವುದೇ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡಿದ್ದ ನ್ಯಾಯಪೀಠ, ಸರ್ಕಾರ ಅಧಿಸೂಚನೆಗಳನ್ನು ಜಾರಿಗೆ ತರಲು ಕೋರಿದರೆ ಸೂಕ್ತ ಪರಿಹಾರ ಪಡೆಯಲು ಅರ್ಜಿದಾರರು ನ್ಯಾಯಾಲಯವನ್ನು ಕೋರಲು ಸ್ವತಂತ್ರರು ಎಂದು ಪೀಠ ಹೇಳಿತು. ಅರ್ಜಿದಾರರ ಪರ ವಕೀಲರು, ಕೈಗಾರಿಕೆ ಮತ್ತು ಪ್ರದೇಶ ಯಾವುದೇ ಆಗಿರಲಿ, ಏಕರೂಪದ ವೇತನ ನಿಗದಿಪಡಿಸುವ ಪ್ರಸ್ತಾವನೆಯು 1948ರ ಕನಿಷ್ಠ ವೇತನ ಕಾಯಿದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಉದ್ದೇಶಿತ ಪರಿಷ್ಕರಣೆಗೆ ಅರ್ಜಿದಾರರು ಈಗಾಗಲೇ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಪ್ರಸ್ತಾವನೆ ಕುರಿತು ಚರ್ಚಿಸಲು ಸರ್ಕಾರ ಕೈಗಾರಿಕೆಗಳೊಂದಿಗೆ ಇನ್ನೂ ಸಭೆಯನ್ನು ಕರೆದಿಲ್ಲ ಎಂದು ತಿಳಿಸಿದರು.
ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿಸಲಾದ ಕನಿಷ್ಠ ವೇತನದಲ್ಲಿ ಭಾರಿ ಹೆಚ್ಚಳದಿಂದ ಒಟ್ಟಾರೆ ವ್ಯವಹಾರಕ್ಕೆ ಮತ್ತು ಉದ್ಯೋಗದಾತರಿಗೆ ತೀವ್ರ ಹೊಡೆತ ನೀಡುತ್ತದೆ ಎಂದು ಕರ್ನಾಟಕ ಉದ್ಯೋಗದಾತರ ಸಂಘ ತಿಳಿಸಿದೆ. ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿದ ದರಗಳು ಹಿಂದಿನ ಹೆಚ್ಚಳಕ್ಕಿಂತ ಶೇ.40 ರಿಂದ ಶೇ.60ರಷ್ಟು ಅಧಿಕವಾಗಿವೆ ಮತ್ತು ಈ ದರಗಳು ದೇಶದಲ್ಲೇ ಅತ್ಯಧಿಕವಾಗಿವೆ ಎಂದು ಹೇಳಲಾಗಿದೆ.