ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ಮುಂದಿನ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಬೃಹತ್ ಸಮಾರಂಭಗಳ ಸಂದರ್ಭದಲ್ಲಿ ಜನಸಂದಣಿ ನಿರ್ವಹಣೆ ಕುರಿತು ಮಂಗಳವಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಜನಸಂದಣಿ ಸೇರುವ ಹಬ್ಬಗಳು, ಪ್ರತಿಭಟನೆಗಳು, ಮೆರವಣಿಗೆಗಳು ಮತ್ತು ಕ್ರೀಡಾಕೂಟಗಳಂತಹ ಕಾರ್ಯಕ್ರಮಗಳಿಗೆ ಭದ್ರತೆ, ಕಾನೂನು - ಸುವ್ಯವಸ್ಥೆ ಕಾಪಾಡಲು ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್ಒಪಿ) ರೂಪಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇನ್ಮುಂದೆ ಸಾರ್ವಜನಿಕ ಕಾರ್ಯಕ್ರಮಕ್ಕೂ ಮುನ್ನ ಆ ಸ್ಥಳದ ಸಂಪೂರ್ಣ ಪರಿಶೀಲನೆ ನಡೆಸಿ, ಆಯೋಜಕರೊಂದಿಗೆ ಚರ್ಚಿಸಿ ವಿವರವಾದ ಯೋಜನೆ ರಚಿಸುವುದು ಕಡ್ಡಾಯವಾಗಿರಲಿದೆ. ಕಾರ್ಯಕ್ರಮ ನಡೆಯಲಿರುವ ಸ್ಥಳದ ಸಾಮರ್ಥ್ಯ, ತುರ್ತು ನಿರ್ಗಮನ ಮಾರ್ಗಗಳ ಲಭ್ಯತೆ ಮತ್ತು ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಕಡ್ಡಾಯವಾಗಿ ಪರಿಶೀಲಿಸಲೇಬೇಕು. ಜನಸಂದಣಿ ನಿರ್ವಹಣೆಗೆ ಪೊಲೀಸರ ಹೊಣೆಗಾರಿಕೆಗಳು, ಟ್ರಾಫಿಕ್ ನಿಯಂತ್ರಣ, ವೈದ್ಯಕೀಯ ನೆರವು ಮತ್ತು ಟಿಕೆಟ್ ವ್ಯವಸ್ಥೆಗಳನ್ನು ಮಾಡಲೇಬೇಕು ಎಂದು ಸೂಚಿಸಲಾಗಿದೆ.
ಕಾರ್ಯಕ್ರಮ ಆಯೋಜನೆಯಾಗುವ ಕಡೆಗಳಲ್ಲಿ ಸಾರ್ವಜನಿಕ ಪ್ರವೇಶ ದ್ವಾರಗಳಲ್ಲಿ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸಬೇಕು. ಜನಸಂದಣಿಯ ನಿರ್ವಹಣೆಗಾಗಿ QR ಕೋಡ್ ಅಥವಾ ಬಯೋಮೆಟ್ರಿಕ್ ತಂತ್ರಜ್ಞಾನದ ಬಳಕೆ ಮತ್ತು ವಿಭಿನ್ನ ವರ್ಗಗಳಿಗೆ (ಉದಾಹರಣೆ: ಪುರುಷರು, ಮಹಿಳೆಯರು, ವೃದ್ಧರು, ವಿಶೇಷಚೇತನರು) ಪ್ರತ್ಯೇಕ ಪ್ರವೇಶ ದ್ವಾರಗಳನ್ನು ಒದಗಿಸಬೇಕು. ತುರ್ತು ನಿರ್ಗಮನ ಮಾರ್ಗಗಳು ಗೋಚರವಾಗುವಂತೆ ಸ್ಪಷ್ಟವಾಗಿ ಗುರುತಿಸಬೇಕು ಮತ್ತು ಅಗತ್ಯ ಸಂದರ್ಭಗಳಲ್ಲಿ ಲೌಡ್‌ಸ್ಪೀಕರ್‌ಗಳ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಇರಬೇಕು.
ತುರ್ತುಸೇವಾ ವಾಹನಗಳಾದ ಅಂಬ್ಯುಲೆನ್ಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ನೆರವಿನ ವ್ಯವಸ್ಥೆಗಳನ್ನ ಖಚಿತಪಡಿಸಿಕೊಳ್ಳಬೇಕು. ಪ್ರತಿಭಟನೆ ಅಥವಾ ದುರಂತಗಳಂತಹ ಅನಿರೀಕ್ಷಿತ ಪರಿಸ್ಥಿತಿಗಳಿಗೆ ತಯಾರಿ ನಡೆಸಲು ಸಿಮ್ಯುಲೇಷನ್ ಡ್ರಿಲ್‌ಗಳನ್ನು ನಡೆಸುವ ಮೂಲಕ ರಕ್ಷಣಾ ತಂಡಗಳ ಜವಾಬ್ದಾರಿಗಳನ್ನು ಮೊದಲೇ ಗುರುತಿಸಬೇಕು. ಯಾವುದೇ ಘಟನೆಯ ಸಮಯದಲ್ಲಿ, ಪೊಲೀಸರು ಅನಗತ್ಯ ತಕರಾರುಗಳನ್ನು ತಪ್ಪಿಸಿ, ಸಾರ್ವಜನಿಕರ ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು. ಜನಸಂದಣಿ ನಿಯಂತ್ರಿಸುವ ಅಥವಾ ಚದುರಿಸುವ ಸಂದರ್ಭದಲ್ಲಿ ಬಲಪ್ರಯೋಗಿಸುವ ಅನಿವಾರ್ಯತೆ ಉಂಟಾದಾಗ ಮೂರು ಬಾರಿ ಎಚ್ಚರಿಕೆಗಳನ್ನು ನೀಡಿದ ನಂತರವೇ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕು ಮತ್ತು ಕಾನೂನುಬದ್ಧವಾಗಿಯೇ ಬಂಧನ ಪ್ರಕ್ರಿಯೆ ನಡೆಸಬೇಕು.