image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಲ್ಲಿ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದ ಆಟೋಗಳನ್ನು ಜಪ್ತಿ ಮಾಡಿದ ಆರ್​ಟಿಒ ಅಧಿಕಾರಿಗಳು

ಬೆಂಗಳೂರಲ್ಲಿ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದ ಆಟೋಗಳನ್ನು ಜಪ್ತಿ ಮಾಡಿದ ಆರ್​ಟಿಒ ಅಧಿಕಾರಿಗಳು

ಬೆಂಗಳೂರು: ನಿಗದಿ ಮಾಡಿದ್ದ ಪ್ರಯಾಣ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿ ಕಾನೂನು ಬಾಹಿರವಾಗಿ ಆಟೋ ಚಾಲನೆ ಮಾಡುತ್ತಿದ್ದವರ ಮೇಲೆ ಸೋಮವಾರ ನಗರದ 11 ಆರ್​ಟಿಒ ಕಚೇರಿಯ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರ ನಿಗದಿಗೊಳಿಸಿದ ಕನಿಷ್ಠ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಮಾಹಿತಿ ಆಧರಿಸಿ ಇಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್​ಟಿಒ) 22 ತಂಡಗಳಾಗಿ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದು, ನಿಯಮ ಉಲ್ಲಂಘಿಸಿದ್ದ 98 ಆಟೊಗಳನ್ನ ಮುಟ್ಟುಗೋಲು ಹಾಕಿ 98 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ರಾಪಿಡೋ, ಉಬರ್ ಬೈಕ್ ಟ್ಸಾಕ್ಸಿಗಳನ್ನ ನಿಷೇಧಿಸಿತ್ತು. ಇದನ್ನ ದುರ್ಬಳಕೆ ಮಾಡಿಕೊಂಡ ಆಟೊ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಬಾಡಿಗೆ ಹಣ ವಿಧಿಸುತ್ತಿದ್ದರು. ಸಾರ್ವಜನಿಕರಿಂದ ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಸೋಮವಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆಟೊ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಿ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಬೇಕೆಂದು ಸಾರಿಗೆ ಇಲಾಖೆಯ ಆಯುಕ್ತರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದರು.

ದುಪ್ಪಟ್ಟು ದರ ಪರಿಶೀಲನೆ ವೇಳೆ ಇತರೆ ದಾಖಲೆಗಳೂ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. 260ಕ್ಕೂ ಅಧಿಕ ದೂರನ್ನು ಆಟೋ ಚಾಲಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ಅಗ್ರಿಗೇಟರ್ ಕಂಪನಿಗಳ ಮೇಲೂ ನಾವು ನಿಗಾ ಇಡುತ್ತಿದ್ದೇವೆ. ಸರ್ಕಾರ ನೀಡಿರುವ ಆಟೋ ದರಕ್ಕೆ ಶೇ.5 ಸರ್ವೀಸ್ ಚಾರ್ಜ್ ಹಾಕಬಹುದು. ಅದು ಬಿಟ್ಟರೆ ದುಪ್ಪಟ್ಟು ದರ ವಿಧಿಸುವ ಅಧಿಕಾರ ಅಗ್ರಿಗೇಟರ್ ಕಂಪನಿಗಳಿಗಿಲ್ಲ. ಎಲ್ಲಾ ಕಡೆ ದಾಳಿ ನಡೆಯುತ್ತಿದೆ. ಇದನ್ನು ಹತೋಟಿಗೆ ತರುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ