ಮೈಸೂರು: ಈ ಬಾರಿ ಸಂಭ್ರಮ ಹಾಗೂ ಅದ್ಧೂರಿ ದಸರಾ ಆಚರಿಸಲು ಜಂಬೂಸವಾರಿ ಮೆರವಣಿಗೆಗೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಎಂಟು ಆನೆ ಶಿಬಿರಗಳಿಗೆ ಭೇಟಿ ನೀಡಿ ಸುಮಾರು 25 ಗಂಡು ಮತ್ತು ಹೆಣ್ಣು ಆನೆಗಳ ಆರೋಗ್ಯ ಪರಿಶೀಲನೆ ನಡೆಸಿದೆ. ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯೇ ಗಜಪಡೆ. ಈ ಗಜಪಡೆಯ ಪ್ರಮುಖ ಕೇಂದ್ರಬಿಂದುವಾಗಿ ಇಟ್ಟುಕೊಂಡು ನಡೆಯುವುದು ಮೈಸೂರು ದಸರಾದ ಜಂಬೂಸವಾರಿ. ಇಂತಹ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳನ್ನು ಆಯ್ಕೆ ಮಾಡುವುದು ಅರಣ್ಯ ಇಲಾಖೆಯಾಗಿದ್ದು, ಈ ಹಿನ್ನೆಲೆಯಲ್ಲಿ ದಸರಾದಲ್ಲಿ ಭಾಗವಹಿಸುವ ಗಜಪಡೆ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜೂನ್ 19ರಿಂದ ಆರಂಭಿಸಲಾಗಿದೆ.
ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿ ಡಿಸಿಎಫ್ ಪ್ರಭುಗೌಡ, ಪಶು ವೈದ್ಯರು ಸೇರಿದಂತೆ ಅಧಿಕಾರಿಗಳ ತಂಡ ಅಭಿಮನ್ಯು ಆನೆ ಇರುವ ಮತ್ತಿಗೋಡು ಕ್ಯಾಂಪ್, ದೊಡ್ಡ ಹರವೆ, ಭೀಮಾನಕಟ್ಟೆ, ದುಬಾರೆ, ಬಳ್ಳೆ ಹಾಗೂ ಬಂಡೀಪುರ ಕ್ಯಾಂಪ್ಗಳಿಗೆ ಭೇಟಿ ನೀಡಿ ಇಲ್ಲಿರುವ ಸುಮಾರು 25 ಗಂಡು ಹಾಗೂ ಹೆಣ್ಣು ಆನೆಗಳ ಆರೋಗ್ಯವನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ 15 ಆನೆಗಳನ್ನು ಅಂತಿಮಗೊಳಿಸಲಾಗುತ್ತದೆ. ಅಂತಿಮಗೊಳಿಸಿದ ಆನೆಗಳ ಪಟ್ಟಿಯನ್ನು ಜುಲೈ ಎರಡನೇ ವಾರ ಪ್ರಕಟಿಸಲಾಗುತ್ತದೆ. ಜೊತೆಗೆ ಎರಡು ಹಂತದ ಗಜಪಯಣದ ಮೂಲಕ ಅರಮನೆಗೆ ಕರೆ ತರಲಾಗುತ್ತದೆ. ಆಗಸ್ಟ್ 4ರಂದು ನಾಗರಹೊಳೆಯ ವೀರನ ಹೊಸಹಳ್ಳಿಯ ಬಳಿಯಿಂದ ಅಭಿಮನ್ಯು ನೇತೃತ್ವದ ಮೊದಲ ಗಜಪಡೆಯನ್ನು ಗಜಪಯಣದ ಮೂಲಕ ಮೈಸೂರಿಗೆ ಕಳುಹಿಸಿ ಕೊಡಲಾಗುತ್ತದೆ. ಅಂದು ಬಂದ ಗಜಪಡೆ ಮೈಸೂರು ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿದ್ದು, ಬಳಿಕ ಆಗಸ್ಟ್ 7ರಂದು ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಮೂಲಕ ಸ್ವಾಗತಿಸಲಾಗುತ್ತದೆ. ನಂತರ ಎರಡನೇ ಹಂತದ ಗಜಪಡೆ ನೇರವಾಗಿ ಅರಮನೆಗೆ ಪ್ರವೇಶಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಪ್ರಭುಗೌಡ, ಈ ಬಾರಿ ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆ ಮಾಡಿದ ಆನೆಗಳ ಪಟ್ಟಿಯನ್ನ ಬೆಂಗಳೂರಿನ ಅರಣ್ಯ ಇಲಾಖೆಯ ಮುಖ್ಯ ಕಚೇರಿಗೆ ಕಳುಹಿಸಲಾಗಿದೆ. ಆ ಪಟ್ಟಿಯನ್ನು ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.