ಹಾವೇರಿ: ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ನಡುವೆ ಇದೀಗ ನಕಲಿ ರಸಗೊಬ್ಬರ ಹಾವಳಿ ಶುರುವಾಗಿದೆ. ಮುಂಗಾರು ಮಳೆ ಉತ್ತಮವಾಗುತ್ತಿದ್ದಂತೆ ಡಿಎಪಿ ಗೊಬ್ಬರ ಅಭಾವ ತಲೆದೋರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಕಳಪೆ ಡಿಎಪಿ ಗೊಬ್ಬರ ಮಾರಾಟ ಮಾಡಿದ್ದು, ಖರೀದಿ ಮಾಡಿ ಬಿತ್ತನೆ ಮಾಡಿದ ಅನ್ನದಾತರು ಕಂಗಾಲಾಗಿದ್ದಾರೆ. ಕಳಪೆ ರಸಗೊಬ್ಬರ ಹಾಕಿದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿವೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಸುಮಾರು 28ಕ್ಕೂ ಅಧಿಕ ರೈತರು ಗ್ರಾಮದ ಎರಡು ಅಂಗಡಿಗಳಲ್ಲಿ 1400 ರೂಪಾಯಿ ಕೊಟ್ಟು 50 ಕೆ.ಜಿ. ಡಿಎಪಿ ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. ಮಾಸನಕಟ್ಟಿ, ದ್ಯಾನಕಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಸಹ ಇದೇ ಗೊಬ್ಬರ ಖರೀದಿಸಿದ್ದಾರೆ.
ಆದರೆ ಬಿತ್ತನೆ ಮಾಡಿ ಒಂದು ತಿಂಗಳು ಕಳೆದರೂ ಮೆಕ್ಕೆಜೋಳ ಸರಿಯಾಗಿ ಬೆಳೆದಿಲ್ಲ. ಬೆಳೆ ಮೊಳಕೆ ಚಿಗುರಿದರೂ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿವೆ. ನಂತರ ತಾವು ಹಾಕಿದ ಡಿಎಪಿ ಗೊಬ್ಬರವನ್ನು ಪರಿಸೀಲಿಸಿದಾಗ ರೈತರಿಗೆ ತಾವು ಹಾಕಿದ್ದು ನಕಲಿ ಡಿಎಪಿ ಗೊಬ್ಬರ ಎಂದು ಗೊತ್ತಾಗಿದೆ. ಇದೀಗ ರೈತರು ಕಳಪೆ ಡಿಎಪಿ ಗೊಬ್ಬರ ಮಾರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಅಧಿಕೃತ ಪರವಾನಗಿ ಪಡೆಯದ ಕಂಪನಿಯ, ಸುಮಾರು 3 ಲಕ್ಷಕ್ಕೂ ಅಧಿಕ ರೂಪಾಯಿ ಮೌಲ್ಯದ ನಕಲಿ ಡಿಎಪಿ ಗೊಬ್ಬರನ್ನು ಅಂಗಡಿ ಮಾಲೀಕರು ಮಾರಾಟ ಮಾಡಿದ್ದಾರೆ ಎಂಬ ಆರೋಪವನ್ನು ರೈತರು ಮಾಡಿದ್ದಾರೆ.
ನಷ್ಟದಿಂದ ನಾವು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ನಮಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸೂಕ್ತವಾದ ಪರಿಹಾರ ಕೊಡುವಂತೆ ರೈತರು ಆಗ್ರಹಿಸಿದ್ದಾರೆ. ಇಷ್ಟು ದಿನ ನಕಲಿ ಬಿತ್ತನೆ ಬೀಜದಿಂದ ತತ್ತರಿಸಿದ್ದೆವು. ಈ ಬಾರಿ ಗೊಬ್ಬರ ಸಹ ನಕಲಿ ಬಂದಿದೆ. ಈ ರೀತಿಯಾದರೆ ರೈತರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ ರೈತರು. ಇನ್ನಾದರೂ ಸರ್ಕಾರ ನಕಲಿ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ರೈತರಿಗೆ ಸೂಕ್ತವಾದ ಪರಿಹಾರ ಕೊಡುವ ಕೆಲಸವಾಗಬೇಕಿದೆ. ಈ ನಡುವೆ ನಕಲಿ ಡಿಎಪಿ ಗೊಬ್ಬರ ಮಾರಾಟ ಮಾಡಿದ ವರ್ತಕರ ಮೇಲೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಶಂಕ್ರಪ್ಪ ಅಂಗಡಿ ಮತ್ತು ಸಿದ್ದಪ್ಪ ಗುರುಸಿದ್ದಪ್ಪನವರ್ ಎಂಬುವವರ ವಿರುದ್ದ ಹಾನಗಲ್ ಕೃಷಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.