ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಐದು ಹುಲಿಗಳನ್ನು ವಿಷಪ್ರಾಶನದಿಂದ ಕೊಂದಿರುವ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವಾಗಲೇ ಇನ್ನೊಂದು ಕೇಸ್ ಪ್ರಾಣಿಪ್ರಿಯರನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಮಾಂಸಕ್ಕಾಗಿ ಜಿಂಕೆ ಹತ್ಯೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 2ಕಾರು, ಬೈಕ್, 2 ಬಂದೂಕುಗಳನ್ನು ಜಪ್ತಿ ಮಾಡಿದ್ದಾರೆ.
ವನ್ಯಜೀವಿ ಹಂತಕರ ತಂಡವೊಂದು ಕೋಲಾರ, ಬನ್ನೇರುಘಟ್ಟ ಅರಣ್ಯದಲ್ಲಿ ಜಿಂಕೆಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದೆ ಎಂದು ಸಚಿವರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ಕಾರ್ಯಾಚರಣೆ ನಡಸಿದ ಬೆಂಗಳೂರು ನಗರ ಅರಣ್ಯ ವಿಭಾಗದ ಸಿಬ್ಬಂದಿ ಮತ್ತು ಜಾಗೃತದಳದ ಜಂಟಿ ತಂಡ ಬನ್ನೇರುಘಟ್ಟ-ನೈಸ್ ರಸ್ತೆ ಜಂಕ್ಷನ್ ಬಳಿ ಕೆ.ಎ 05 / ಎಜಿ 1302 ಸಂಖ್ಯೆಯ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿ 4 ಸತ್ತ ಚುಕ್ಕೆ ಜಿಂಕೆ ಮತ್ತು ಒಂದು ಮೃತ ಕಾಡು ಹಂದಿ ದೇಹ ಸಾಗಿಸುತ್ತಿರುವುದನ್ನು ಪತ್ತೆ ಮಾಡಿ, ಪ್ರತಾಪ್ (31) ಎಂಬಾತನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಸಿ.ಕೆ. ಪಾಳ್ಯದ ಶೆಡ್ನಲ್ಲಿ ಮತ್ತಷ್ಟು ಜಿಂಕೆಗಳ ಮೃತದೇಹ ಮತ್ತು ಮಾಂಸ ಇರುವ ವಿಷಯ ತಿಳಿದು, ಅಲ್ಲಿ ದಾಳಿ ಮಾಡಿ, ಬೈಕ್ ಮತ್ತು ಮತ್ತೊಂದು ಇಂಡಿಕಾ ಕಾರನ್ನೂ ವಶಪಡಿಕೊಂಡು ಒಟ್ಟು 10 ಜಿಂಕೆ ಹಾಗೂ ಒಂದು ಕಾಡು ಹಂದಿಯ ಸುಮಾರು 74 ಕೆಜಿ ಜಿಂಕೆ ಮಾಂಸ, 1 ಡಬಲ್ ಬ್ಯಾರೆಲ್ ಗನ್, 1 ಸಿಂಗಲ್ ಬ್ಯಾರೆಲ್ ಗನ್ ಮತ್ತು 10 ಕಾರ್ಟ್ರಿಡ್ಜ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಂಕೆ ಮಾಂಸ ಇಟ್ಟಿದ್ದ ಶೆಡ್ ಮಾಲೀಕ ಭೀಮಪ್ಪ ಆರೋಪಿಗಳಾದ ಬಾಲರಾಜು ಹಾಗೂ ರಮೇಶ್ ಎಂಬುವರು ನಾಪತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ವಹಿಸಿದ್ದರು. ಮಾಹಿತಿ ದೊರೆತ ಕೂಡಲೇ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ಜಿಂಕೆ ಹಂತಕರ ಜಾಲ ಭೇದಿಸಿರುವ ಬೆಂಗಳೂರು ನಗರ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಭಿನಂದಿಸಿದ್ದಾರೆ.