ದಾವಣಗೆರೆ: ಸರ್ಕಾರಿ ಕಟ್ಟಡ, ಸಭಾಂಗಣಗಳು, ರಸ್ತೆ, ಉದ್ಯಾನವನ ಹೀಗೆ ವಿವಿಧ ಸರ್ಕಾರಿ ಆಸ್ತಿಗಳ ಮೇಲೆ ಜನಪ್ರತಿನಿಧಿಗಳ ಹೆಸರು ನಾಮಕರಣಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಜೀವಂತವಿರುವ ರಾಜಕಾರಣಿಗಳ ಹೆಸರುಗಳನ್ನು ತೆಗೆದುಹಾಕುವಂತೆ ಹೈಕೋರ್ಟ್ ದಾವಣಗೆರೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣ, ಜಿಲ್ಲಾ ಪಂಚಾಯತ್ ಸಭಾಂಗಣ, ನವೀಕೃತ ಹಳೇ ಬಸ್ ನಿಲ್ಧಾಣ, ಉದ್ಯಾವನಗಳಿಗೆ ನಾಮಕರಣ ಮಾಡಿರುವ ಜನಪ್ರತಿನಿಧಿಗಳ ನಾಮಫಲಕಗಳನ್ನು ತೆಗೆಯಲು ಹೈಕೋರ್ಟ್ ನಾಲ್ಕು ವಾರಗಳ ಗಡುವು ನೀಡಿದೆ.
ಜನಪ್ರತಿನಿಧಿಗಳ ಹೆಸರು ನಾಮಕರಣ ಪ್ರಶ್ನಿಸಿ ದಾವಣಗೆರೆಯ ವಕೀಲ ರಾಘವೇಂದ್ರ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. "ಸರ್ಕಾರಿ ಕಟ್ಟಡಗಳಿಗೆ ಸ್ವಾತಂತ್ರ್ಯ ಹೋರಾಟಗಾರರ, ಇಲ್ಲವೇ ಸಾವನ್ನಪ್ಪಿದ ಮಹನೀಯರ ಹೆಸರನ್ನು ಇಡಬೇಕು. ಆದರೆ ದಾವಣಗೆರೆಯಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಹೆಸರು, ಕುಂದುವಾಡ ಕೆರೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೆಸರು, ಬಡಾವಣೆಗಳಿಗೆ ಎಸ್.ಎ.ರವೀಂದ್ರನಾಥ್ ಹೆಸರು ಸೇರಿದಂತೆ, ಹೀಗೆ ಹಲವು ಸಭಾಂಗಣಗಳಿಗೆ ಬದುಕಿದ್ದ ಜನಪ್ರತಿನಿಧಿಗಳ ಹೆಸರನ್ನು ಇಡಲಾಗಿದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅದರ ವಿಚಾರಣೆ ನಡೆಸಿದ ಹೈಕೋರ್ಟ್, ಹೆಸರು ತೆರವಿಗೆ ಸಕ್ಷಮ ಪ್ರಾಧಿಕಾರಕ್ಕೆ 4 ವಾರಗಳ ಗಡುವು ನೀಡಿ ಜಿಲ್ಲಾಧಿಕಾರಿ, ಸಿಎಸ್ಗೆ ಸೂಚನೆ ನೀಡಿದೆ.
2012ರ ಆದೇಶವನ್ನು ಉಲ್ಲೇಖಿಸಿರುವ ಹೈಕೋರ್ಟ್, ಜೀವಂತ ವ್ಯಕ್ತಿಗಳ ಹೆಸರು ನಾಮಕರಣ ನಿಷಿದ್ಧ ಎಂದು ಹೇಳಿದೆ. ಸರ್ಕಾರಿ ಆಸ್ತಿಗಳ ಮೇಲಿರುವ ಇಂತಹ ಹೆಸರುಗಳ ಬದಲಾವಣೆಗೆ ಆದೇಶಿಸಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಪ್ರತಿಕ್ರಿಯಿಸಿ "ಸುಪ್ರೀಂ ಕೋರ್ಟ್ ಕೂಡ 13 ವರ್ಷಗಳ ಹಿಂದೆಯೇ ಬದುಕಿರುವ ವ್ಯಕ್ತಿಗಳ ಹೆಸರನ್ನು ಸರ್ಕಾರಿ ಕಟ್ಟಡ, ಉದ್ಯಾನವನ, ರಸ್ತೆ, ಸಭಾಂಗಣಗಳಿಗೆ ನಾಮಕರಣ ಮಾಡಕೂಡದು ಎಂದು ಹೇಳಿದೆ. ಕೆಲವರು ತಾವು ಸತ್ತ ಮೇಲೆ ಜನರು ತಮ್ಮನ್ನು, ತಮ್ಮ ಕೆಲಸಗಳನ್ನು ಗುರುತಿಸುವುದಿಲ್ಲ ಎಂದು ಬದುಕಿದ್ದಾಗಲೇ ಹೆಸರುಗಳನ್ನು ಇಟ್ಟಿಕೊಂಡಿದ್ದಾರೆ. ಅವುಗಳನ್ನು ತೆರವು ಮಾಡಬೇಕು" ಎಂದು ಆಗ್ರಹಿಸಿದರು. ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, "ಯಾರ ಹೆಸರನ್ನೂ ಕೂಡ ಸರ್ಕಾರಿ ಕಟ್ಟಡ ಕಾಮಗಾರಿಗಳ ಮೇಲೆ ಹಾಕಿಕೊಳ್ಳಬಾರದು. ಜನರ ತೆರಿಗೆ ಹಣದಿಂದ ಕಟ್ಟಡಗಳನ್ನು ನಿರ್ಮಿಸಿರುತ್ತಾರೆ. ನಾವೇನು ನಮ್ಮ ಅಡಿಕೆ ಮಾರಿ ಬಂದ ಹಣದಿಂದ ಸರ್ಕಾರಿ ಕಟ್ಟಡ ಕಟ್ಟೋದಿಲ್ಲ. ಇಲ್ಲವೇ ಮನೆಯಿಂದ ಹಣ ತಂದು ಕಟ್ಟುವುದಿಲ್ಲ. ಯಾವುದೇ ಸರ್ಕಾರಿ ಕಟ್ಟಡಗಳ ಮೇಲೆ ಶಾಸಕರ ಹೆಸರು ಇಡುವುದು ತಪ್ಪು. ಇನ್ನೂ ಕಠಿಣವಾದ ತೀರ್ಪು ಬರಲಿ" ಎಂದು ಒತ್ತಾಯಿಸಿದರು.