image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೈಗಾರಿಕಾ ಕಂಪನಿಗಳಿಗೆ 'IOD ಗೋಲ್ಡನ್ ಪೀಕಾಕ್' ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಹೆಚ್.ಡಿ. ಕುಮಾರಸ್ವಾಮಿ

ಕೈಗಾರಿಕಾ ಕಂಪನಿಗಳಿಗೆ 'IOD ಗೋಲ್ಡನ್ ಪೀಕಾಕ್' ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪರಿಸರ ಪೂರಕ ಚಟುವಟಿಕೆ ಹಾಗೂ ಕೈಗಾರಿಕೆ, ಉಕ್ಕು ಕ್ಷೇತ್ರಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ನಿರ್ದೇಶಕರ ಸಂಸ್ಥೆ (IOD) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಗಾಲ ಹೊರಸುವಿಕೆ ತಡೆಯುವಲ್ಲಿ ದೊಡ್ಡ ಕೊಡುಗೆ ನೀಡಿರುವ ಕೈಗಾರಿಕೆ ಕಂಪನಿಗಳಿಗೆ 'IOD ಗೋಲ್ಡನ್ ಪೀಕಾಕ್' ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ದೇಶದ ಪ್ರಗತಿ, ಆರ್ಥಿಕ ವೃದ್ಧಿಯಲ್ಲಿ ಕಾರ್ಪೊರೇಟ್ ಕಾರ್ಯತಂತ್ರದ ಮೂಲದಲ್ಲಿ ಗಂಭೀರ ಹಾಗೂ ದೂರಗಾಮಿ ಸುಸ್ಥಿರತೆಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಜಾಗತಿಕ ಸಂಚಿತ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕೇವಲ 4% ಕೊಡುಗೆ ನೀಡುತ್ತಿದ್ದರೂ, ಭಾರತವು ತನ್ನ ಹವಾಮಾನ ಬದ್ಧತೆಗಳ ಕಡೆಗೆ ದೃಢನಿಶ್ಚಯದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದರು.

"ಭಾರತದ ತಲಾ ಇಂಗಾಲ ಹೊರಸೂಸುವಿಕೆ ಕೇವಲ 1.89 ಟನ್‌ಗಳಾಗಿದ್ದು, ಇದು ಜಾಗತಿಕ ಸರಾಸರಿಗಿಂತ ಅರ್ಧಕ್ಕಿಂತ ಕಡಿಮೆ. ಆದರೂ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ" ಎಂದು ತಿಳಿಸಿದರು. ಭಾರತದ ಕೈಗಾರಿಕಾ ವಲಯದಾದ್ಯಂತ ಪರಿಸರ ನಿರ್ವಹಣೆ, ಪರಿಸರ - ನಾವೀನ್ಯತೆ ಮತ್ತು ಔದ್ಯೋಗಿಕ ಸುರಕ್ಷತೆಗೆ ಅತ್ಯುತ್ತಮ ಕೊಡುಗೆಗಳನ್ನು ಗೋಲ್ಡನ್ ಪೀಕಾಕ್ ಪ್ರಶಸ್ತಿಗಳು ಗುರುತಿಸಿವೆ ಎಂದ ಸಚಿವರು; ಖಾಸಗಿ ವಲಯವು ನಾವೀನ್ಯತೆ ಮತ್ತು ಹಸಿರು ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ದಿಟ್ಟ, ದೀರ್ಘಕಾಲೀನ ಪಣತೊಡಬೇಕೆಂದು ನುಡಿದರು. ಈ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು, ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕೆ, ಶೈಕ್ಷಣಿಕ ಮತ್ತು ಬಹುಪಕ್ಷೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ