image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆಶಾ ಮಾರ್ಗದರ್ಶಕಿಯರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ತಡೆ

ಆಶಾ ಮಾರ್ಗದರ್ಶಕಿಯರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ನೇಮಕವಾಗಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಮಾರ್ಗದರ್ಶಕಿಯರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. 2025ರ ಜೂ.12ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶ ರದ್ದು ಕೋರಿ ಬೆಳಗಾವಿಯ ಜರೀನಾ ಬೇಗಂ ಮುಲ್ಲಣ್ಣವರ್ ಸೇರಿದಂತೆ 46 ಆಶಾ ಮಾರ್ಗದರ್ಶಕಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ ಸರ್ಕಾರದ, ರಾಷ್ಟ್ರೀಯ ಆರೋಗ್ಯ ಮಿಷನ್, ರಾಜ್ಯ ಸರ್ಕಾರ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ, ರಾಷ್ಟ್ರೀಯ ಆರೋಗ್ಯ ಮಿಷನ್-ಕರ್ನಾಟಕ ಮತ್ತದರ ಮುಖ್ಯ ಆಡಳಿತಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಆಶಾ ಮಾರ್ಗದರ್ಶಕರನ್ನು ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲು, ಅವರನ್ನು ಮೇಲ್ವಿಚಾರಣೆ ಮಾಡಲು, ಆಶಾ ನಿಧಿ ಪೋರ್ಟ್ ಅನ್ನು ನಿರ್ವಹಿಸಲು ಮತ್ತು ಪ್ರೋತ್ಸಾಹಧನ ಪಾವತಿಯ ಪ್ರಕ್ರಿಯೆಯನ್ನು ಸಕಾಲದಲ್ಲಿ ನಿರ್ವಹಣೆ ಮಾಡಲು ನಿಯೋಜಿಸಲಾಗಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದಲ್ಲಿ 195 ಆಶಾ ಮಾರ್ಗದರ್ಶಕಿಯರು ಕೆಲಸ ಮಾಡುತ್ತಿದ್ದರು. ಅವರು ನಿರ್ವಹಿಸುತ್ತಿರುವ ಕಾರ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದ ಮತ್ತು ತಾಲೂಕು ಮಟ್ಟದಲ್ಲಿ ಮಹಿಳಾ ಆರೋಗ್ಯ ಸಂದರ್ಶಕರು/ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು/ಸಮುದಾಯ ಆರೋಗ್ಯ ಅಧಿಕಾರಿಗಳು ನಿರ್ವಹಿಸಲಿದ್ದಾರೆ.

ಇದರಿಂದ 195 ಆಶಾ ಮಾರ್ಗದರ್ಶಕರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗುತ್ತಿದೆ. ಅವರುಗಳಲ್ಲಿ ಅರ್ಹರಿದ್ದಲ್ಲಿ ಆಯಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಖಾಲಿಯಿರುವ ಶುಶ್ರೂಷಕರ ಹುದ್ದೆಗಳಿಗೆ ಗುತ್ತಿಗೆ ನೌಕರರಾಗಿ ಆದ್ಯತೆ ಮೇಲೆ ನೇಮಿಸಲು ಪರಿಗಣಿಸಬಹುದಾಗಿದೆ ಎಂದು ತಿಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದಾರೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರಿಧರ್ ಪ್ರಭು ವಾದ ಮಂಡಿಸಿ, ಆಶಾ ಮಾರ್ಗದರ್ಶಕಿಯರು ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದಾರೆ. ಅವರನ್ನು ಯಾವುದೇ ಸಕಾರಣವಿಲ್ಲದೆ ಸರ್ಕಾರ ಸೇವೆಯಿಂದ ಮುಕ್ತಿಗೊಳಿಸಿದೆ. ಈ ಕ್ರಮದಿಂದ ಆಶಾ ಮಾರ್ಗದರ್ಶಕಿಯರ ಜೀವನಾಧಾರಕ್ಕೆ ತೊಂದರೆ ಉಂಟಾಗಿದೆ. ಅವರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಆಶಾ ಮಾರ್ಗದರ್ಶಕಿಯರು ತಮ್ಮ ಕೆಲಸಗಳಿಗೆ ಹಾಜರಾಗಲು ಆದೇಶಿಸಬೇಕು ಎಂದು ಕೋರಿದರು.

Category
ಕರಾವಳಿ ತರಂಗಿಣಿ