image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಾಹ್ಯಾಕಾಶ ಮಹತ್ತರ ಅಧ್ಯಯನಕ್ಕೆ ಧಾರವಾಡದ ಕೊಡುಗೆ ಅನನ್ಯ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಬಾಹ್ಯಾಕಾಶ ಮಹತ್ತರ ಅಧ್ಯಯನಕ್ಕೆ ಧಾರವಾಡದ ಕೊಡುಗೆ ಅನನ್ಯ : ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ: ಹೆಸರು ಕಾಳು ಮತ್ತು ಮೆಂತ್ಯೆ ಬೀಜಗಳನ್ನು 'ಆಕ್ಸಿಯಂ-4' ಮಿಷನ್‌ ಯೋಜನೆಗಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿದ್ದು, ಬಾಹ್ಯಾಕಾಶ ಕೃಷಿ ಮತ್ತು ಗಗನಯಾತ್ರಿಗಳ ಪೋಷಣೆಗೆ ಕೈಗೊಂಡಿರುವ ಮಹತ್ತರ ಅಧ್ಯಯನಕ್ಕೆ ಧಾರವಾಡದ ಕೊಡುಗೆ ಅನನ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಸುದೀರ್ಘ 41 ವರ್ಷಗಳ ಬಳಿಕ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ತೆರಳಿರುವುದು ಹೆಮ್ಮೆಯ ಸಂಗತಿ. ಇದರಲ್ಲಿ ಐಐಟಿ ಧಾರವಾಡ, ಯುಎಎಸ್ ಕೃಷಿ ವಿಶ್ವವಿದ್ಯಾಲಯ ಹಾಗೂ ಧಾರವಾಡದ ಸಹಯೋಗವೂ ಇರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.

'Sprouting in Space' ಪ್ರಯೋಗದಲ್ಲಿ 'ಹೆಸರು ಕಾಳು' ಮತ್ತು 'ಮೆಂತ್ಯೆ' ಬೀಜ ಬಾಹ್ಯಾಕಾಶದಲ್ಲಿ ಮೊಳೆಕೆಯೊಡೆಯುವ ಪ್ರಕ್ರಿಯೆ ನಡೆಯಲಿದೆ. ಗಗನಯಾತ್ರಿಗಳು ಈ ಬೀಜಗಳಿಗೆ ನೀರು ಸೇರಿಸಿ ಬೀಜ ಮೊಳೆಯುವ ಪ್ರಕ್ರಿಯೆ ನಡೆಸುವರು. ಈ ಮೊಳಕೆ ಕಾಳು ಬಾಹ್ಯಾಕಾಶಯಾನಿಗಳಿಗೆ ತಾಜಾ ಮತ್ತು ಪೌಷ್ಠಿಕಾಂಶ ಆಹಾರ ಪೂರೈಸಲು ಸಹಾಯಕವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೆಸರು ಕಾಳು ಮತ್ತು ಮೆಂತ್ಯೆ ಭಾರತೀಯ ಆಹಾರ ಪದ್ಧತಿಯಲ್ಲಿ ವಿಶಿಷ್ಠವಾಗಿದ್ದು, ಹೇರಳ ಪೋಷಕಾಂಶಯುಳ್ಳದ್ದಾಗಿದೆ. ಬಾಹ್ಯಾಕಾಶದಲ್ಲಿ ಲಭ್ಯವಿರುವ ಸ್ಥಳ, ತೂಕ ಹಾಗೂ ಸಂಪನ್ಮೂಲಗಳ ಮಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ರೀತಿ ಮೊಳಕೆ ಕಾಳು ಆಹಾರೋತ್ಪತ್ತಿಯ ನಾವೀನ್ಯತೆಗೆ ನಮ್ಮ ಧಾರವಾಡ ದಾರಿ ತೋರಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ.ರವಿಕುಮಾರ್ ಹೊಸಮನಿ ಮತ್ತು ಧಾರವಾಡ ಐಐಟಿಯ ಡಾ.ಸುಧೀರ್ ಸಿದ್ದಾಪುರೆಡ್ಡಿ ಅವರು ಇದರ ಮುಂದಾಳತ್ವ ವಹಿಸಿದ್ದಾರೆ. ಧಾರವಾಡ ಈಗ ಕೇವಲ ಶೈಕ್ಷಣಿಕ ನಗರಿ ಮಾತ್ರವಲ್ಲದೆ, ವಿಜ್ಞಾನ ಸೃಜನಶೀಲತೆಯ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ ಎಂಬುದುಕ್ಕೆ ಇದು ನಿದರ್ಶನ ಎಂದು ಸಚಿವರು ಬರೆದುಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ