image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸುತ್ತೋಲೆ

ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸುತ್ತೋಲೆ

ಬೆಂಗಳೂರು: ರಾಜ್ಯದ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಲ್ಲ ಇಲಾಖೆಗಳೂ ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಈ ಸೂಚನೆ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಈ ಸಂಬಂಧ ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಸುತ್ತೋಲೆ ಹೊರಡಿಸಿದ್ದಾರೆ. ಕನ್ನಡ ಭಾಷೆಯಲ್ಲಿಯೇ ಆಡಳಿತ ನಡೆಸುವ ಬಗ್ಗೆ ಈಗಾಗಲೇ ಹಲವು ಬಾರಿ ಸೂಚನೆಗಳನ್ನು ನೀಡಿ ಸುತ್ತೋಲೆಗಳನ್ನು ಹೊರಡಿಸಿದ್ದರೂ, ಅದು ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ಮಾಡುತ್ತಲೇ ಇದೆ. ಆದ್ದರಿಂದ, ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಕನ್ನಡ ಇರಬೇಕು ಎಂದು ‘ಕರ್ನಾಟಕ ರಾಜ್ಯ ಭಾಷಾ ಕಾಯ್ದೆ- 1963’ರಲ್ಲಿ ತಿಳಿಸಲಾಗಿದೆ. ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರಿಸಬೇಕು. ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ವಿಧಾನ ಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆ ಇತ್ಯಾದಿಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಸಲ್ಲಿಸಲು ತಿಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಸೇರಿ ಎಲ್ಲ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಕಚೇರಿಗಳಿಗೆ ಒದಗಿಸಿರುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ ಮುಂತಾದವುಗಳನ್ನು ಕನ್ನಡದಲ್ಲಿ ಭರ್ತಿ ಮಾಡುವಂತೆ, ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿ ಕನ್ನಡದಲ್ಲಿಯೇ ಇರುವಂತೆಯೂ ತಿಳಿಸಲಾಗಿದೆ. ಸಭಾ ಸೂಚನೆ, ಕಾರ್ಯಸೂಚಿ, ಸಂಕ್ಷಿಪ್ತ ಟಿಪ್ಪಣಿ ಹಾಗೂ ನಡಾವಳಿಗಳನ್ನು ಕನ್ನಡದಲ್ಲಿ ತಯಾರಿಸಿ ಸರ್ಕಾರದ ಭಾಷಾ ನೀತಿಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರ, ಹೊರ ರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

Category
ಕರಾವಳಿ ತರಂಗಿಣಿ