ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಎದುರಾಗುವ ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಹರಿಸುವುದು ಮತ್ತು ಸುಗಮ ಪಾದಚಾರಿ ಮಾರ್ಗ ಹಾಗೂ ವಾಹನ ಸಂಚಾರಕ್ಕೆ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಂಡಿರುವ ಕಾರ್ಯವಿಧಾನದ ಕುರಿತು ಸವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹೈಕೋರ್ಟ್ ಸೂಚಿಸಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ದೇಶನ ಕೋರಿ ವಿಜಯ್ ಮೆನನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
2015ರಲ್ಲಿ ಈ ಅರ್ಜಿ ಸಲ್ಲಿಕೆಯಾಗಿದೆ. 2024ರ ಸೆಪ್ಪಂಬರ್ 21ರ ಆದೇಶದಂತೆ ಸವಿವರವಾದ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆ ಆದೇಶದಂತೆ ಬಿಬಿಎಂಪಿ ಸಲ್ಲಿಸಿರುವ ವರದಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ನಿಭಾಯಿಸುವುದಕ್ಕಾಗಿ ಇತ್ತೀಚೆಗೆ ಕೈಗೊಂಡ ಕಾರ್ಯವಿಧಾನಗಳ ಕುರಿತು ವಿವರಣೆ ನೀಡಿಲ್ಲ. ಹೀಗಾಗಿ ಇತ್ತೀಚಿನ ಕಾರ್ಯವಿಧಾನಗಳ ಕುರಿತಂತೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಪ್ರಮಾಣ ಪತ್ರದಲ್ಲಿ ಬಿಬಿಎಂಪಿ ಪ್ರತಿವರ್ಷ, ಪ್ರತಿ ಅವಧಿಯಲ್ಲಿ ಗುಂಡಿಗಳ ಸಮಸ್ಯೆಯನ್ನು ನಿಭಾಯಿಸುವುದು, ಸುಗಮ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಯಾವ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದರ ಕುರಿತು ವಿವರಣೆ ಇರಬೇಕು. ಅಲ್ಲದೆ, ವಿಶೇಷವಾಗಿ ಈ ಮಳೆಗಾಲದ ಸಂದರ್ಭಗಳಲ್ಲಿ ರಸ್ತೆಗಳು ಮತ್ತು ಗುಂಡಿಗಳನ್ನು ದುರಸ್ತಿಗೆ ತೆಗೆದುಕೊಂಡ ಕ್ರಮಗಳ ಕುರಿತಂತೆ ವಾಸ್ತವ ಅಂಶಗಳನ್ನು ಹೊಂದಿರಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಗುಂಡಿಗಳಿಂದ ರಸ್ತೆ ಅಪಘಾತಕ್ಕೆ ಒಳಗಾಗುವ ಸಂತ್ರಸ್ತರಿಗೆ ಪರಿಹಾರ ವಿತರಿಸಿರುವುದು ಹಾಗೂ ಪರಿಹಾರ ಪಾವತಿಗೆ ಸಂಬಂಧದ ಕಾರ್ಯ ವಿಧಾನಗಳ ಕುರಿತು ಅರ್ಜಿಯಲ್ಲಿ ಒಂದು ಮನವಿ ಇದೆ. ಅದಕ್ಕೂ ಸೂಕ್ತ ರೀತಿಯ ಪ್ರತ್ಯುತ್ತರವಾಗಿ ಬಿಬಿಎಂಪಿ ಪ್ರತಿಕ್ರಿಯೆ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ. ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, 2015ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ನ್ಯಾಯಾಲಯ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದರು.