ಬೆಂಗಳೂರು : ರಾಜ್ಯ ಸರ್ಕಾರವೇ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುತ್ತಿದೆ. ಈ ಎಲ್ಲವೂ ಬಿ. ಆರ್ ಪಾಟೀಲ್ ಹೇಳಿಕೆಯಿಂದ ಗೊತ್ತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಸರ್ಕಾರದ ವಿರುದ್ಧ ವಾಗ್ಥಾಳಿ ನಡೆಸಿದ್ದಾರೆ. ನೆಲಮಂಗಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಬಿ. ಆರ್. ಪಾಟೀಲ್ ಗಂಭೀರವಾದ ರಾಜ್ಯದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಯಾವ ಇಲಾಖೆ ಬಡವರಿಗೆ ಮನೆಗಳನ್ನು ಕೊಡಬೇಕಿತ್ತೋ, ಅಲ್ಲಿಯೂ ಸಹ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಇಂದು ರಾಜ್ಯದ ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಿರಿಯ ನಾಯಕರಾದ ಬಿ. ಆರ್ ಪಾಟೀಲ್ ಅವರನ್ನ ಆಡಳಿತ ಪಕ್ಷದ ನಾಯಕರು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಡವರಿಗೆ, ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಸರ್ಕಾರದಿಂದ ಬಡವರಿಗೆ ಯಾವುದೇ ಅನುಕೂಲ ಇಲ್ಲ ಎಂದು ತಿಳಿಸಿದ್ದಾರೆ.
ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಅನೇಕ ಬಡವರ ಪರ ಯೋಜನೆ ನೀಡಿದ್ರು. ಎಲ್ಲಾ ಯೋಜನೆ ಮರೆತಿದ್ದಾರೆ. ಭ್ರಷ್ಟಾಚಾರ, ಭ್ರಷ್ಟಾಚಾರ, ಭ್ರಷ್ಟಾಚಾರ ಬಿಟ್ರೆ ಈ ಸರ್ಕಾರದಲ್ಲಿ ಯಾವುದೇ ಯೋಜನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ವಸತಿ ಹಂಚಿಕೆಯಲ್ಲಿ ಲಂಚ ಆರೋಪಕ್ಕೆ ಸಂಬಂಧಪಟ್ಟಂತೆ ಆಡಿಯೋ ಸಂಭಾಷಣೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಶಾಸಕ ಬಿ ಆರ್ ಪಾಟೀಲ್, ಅದು ನಾನೇ ಮಾತನಾಡಿದ ಆಡಿಯೋ. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು. ನಾವು ಜನಪರ ಆಡಳಿತ ಕೊಡುತ್ತೇವೆ ಎಂದು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಆದರೆ ಹೀಗೆ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದರು.