image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಾವು ಬೆಲೆ ಕುಸಿತ: ಬೆಂಬಲ ಬೆಲೆಗೆ ಒಪ್ಪಿದ ಕೇಂದ್ರ ಸರ್ಕಾರ

ಮಾವು ಬೆಲೆ ಕುಸಿತ: ಬೆಂಬಲ ಬೆಲೆಗೆ ಒಪ್ಪಿದ ಕೇಂದ್ರ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಮಾವಿನ ಬೆಲೆ ಕುಸಿತದಿರುವ ಹಿನ್ನೆಲೆಯಲ್ಲಿ 'ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ'ಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ಪ್ರತಿ ಕೆ.ಜಿ.ಗೆ ಎರಡೆರೆಡು ರೂ.ಗಳಂತೆ ಒಟ್ಟು 4 ರೂ. ವ್ಯತ್ಯಾಸ ಪಾವತಿಸಿ ಮಾರುಕಟ್ಟೆ ಚೈತನ್ಯಕ್ಕೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿವೆ. ಶನಿವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿಡಿಯೋ‌ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾವು ಬೆಳೆಗಾರರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಮೂಲಕ 2.5 ಲಕ್ಷ ಮೆಟ್ರಿಕ್​​ ಟನ್​ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ‌ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೃಷಿ-ತೋಟಗಾರಿಕೆ ಇಲಾಖೆ‌ ಅಧಿಕಾರಿಗಳು ಹಾಜರಿದ್ದರು. ಸೋಮವಾರ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ‌ಇದೆ.

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದು. 2025-26ನೇ ಋತುವಿನಲ್ಲಿ 1.39 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಅಂದಾಜು 8ರಿಂದ 10 ಲಕ್ಷ ಟನ್​ ಮಾವು ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಾಗಿವೆ. ಮಾವಿನ ಕೊಯ್ಲು ಮೇಯಿಂದ ಜುಲೈವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳಾಗಿವೆ. ಈ ನಿಟ್ಟಿನಲ್ಲಿ 11.06.2025 ರಂದು ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು ಮತ್ತು 13.06.2025 ರಂದು ಸ್ಪಷ್ಟೀಕರಣಗಳಿಗೆ ಉತ್ತರ ನೀಡಲಾಯಿತು. ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು ಪಿಡಿಪಿಎಸ್ (PDPS) ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ.

Category
ಕರಾವಳಿ ತರಂಗಿಣಿ