ಬೆಂಗಳೂರು: ''ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಬಿಎಂಆರ್ಸಿಎಲ್ಗೆ ಅರ್ಜಿ ಹಾಕಲು ಕೆಎಂಎಫ್ಗೆ ಸೂಚನೆ ನೀಡಿದ್ದು, 10 ಸ್ಥಳಗಳ ಪೈಕಿ 8 ಕಡೆಗಳಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೇನೆ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಬೆಂಗಳೂರು ಅಭಿವೃದ್ಧಿ, ನಾನಾ ಸಮಸ್ಯೆಗಳ ನಿವಾರಣೆ, ನಂಬಿಕೆ ನಕ್ಷೆ, ಖಾತಾ ವಿತರಣೆ, ಹಸಿರು ಬೆಂಗಳೂರು ಮತ್ತಿತರ ವಿಚಾರಗಳ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ವ್ಯಾಪ್ತಿಯ ಸಚಿವರು ಹಾಗೂ ಶಾಸಕರ ಜೊತೆ ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲಿ ಇಂದು ಸಭೆ ನಡೆಸಿದರು.
ಬಳಿಕ ಮಾಧ್ಯಮಗಳಿಗೆ ವಿವರಿಸಿದ ಅವರು, ''ಬಿಎಂಆರ್ಸಿಎಲ್ನವರು ಟೆಂಡರ್ ಕರೆದಿದ್ದು, ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳನ್ನು ತೆರೆಯಲು ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದು, ಟೆಂಡರ್ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ ಅಮೂಲ್ ಅವರು ಜಾಗತಿಕ ಟೆಂಡರ್ನಲ್ಲಿ ಅರ್ಜಿ ಹಾಕಿ ಮಳಿಗೆ ತೆರೆದಿದ್ದಾರೆ. ತೆರೆಯಲಾಗಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಉಳಿದ 8 ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ'' ಎಂದರು.