ಬೆಂಗಳೂರು: ಆರ್ಸಿಬಿ ತಂಡ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಮತ್ತು ಮುಖ್ಯಮಂತ್ರಿ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ, ನಗರದ ಫ್ರೀಡ್ಂ ಪಾರ್ಕ್ನಲ್ಲಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಸರ್ಕಾರ ತನ್ನ ಪ್ರಚಾರದ ತೆವಲಿಗೆ ಸರಿಯಾದ ವ್ಯವಸ್ಥೆ ಮಾಡದೇ ಆತುರಾತುರವಾಗಿ ಕಾರ್ಯಕ್ರಮ ಮಾಡಿ ಅಮಾಯಕರ ಬಲಿ ಪಡೆದಿದೆ. ಈ ಸಾವುಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದರು. ಆದರೆ, ಫ್ರೀಡಂ ಪಾರ್ಕ್ನಲ್ಲೇ ಪೊಲೀಸರು, ಬಿಜೆಪಿ ನಾಯಕರನ್ನು ತಡೆದರು. ಈ ವೇಳೆ ನುಕುನುಗ್ಗಾಟ ನಡೆಯಿತು. ನಂತರ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್ಗಳಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು. ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಷ್ಟರಲ್ಲೇ ಮಳೆ ಬಂದ ಕಾರಣ ಪ್ರತಿಭಟನೆ ಅಲ್ಲಿಗೆ ಮೊಟುಕುಗೊಂಡಿತು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್, ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.