image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ, ಐಸಿಸಿ ಮುಖ್ಯಸ್ಥ ಜಯ್ ಶಾ ವಿರುದ್ಧ ಕ್ರಮಕ್ಕೆ ಒತ್ತಾಯ

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ, ಐಸಿಸಿ ಮುಖ್ಯಸ್ಥ ಜಯ್ ಶಾ ವಿರುದ್ಧ ಕ್ರಮಕ್ಕೆ ಒತ್ತಾಯ

ಬೆಂಗಳೂರು: ಐಪಿಎಲ್ ಕ್ರಿಕೆಟ್ ತಂಡಕ್ಕೆ ಮೂಲ ವಾರಸುದಾರರೇ ಬಿಸಿಸಿಐ ಹಾಗೂ ಐಸಿಸಿ ಸಮಿತಿಗಳು ಈ ಸಮಿತಿಯ ಮುಖ್ಯಸ್ಥರು ಮತ್ತು ಐಸಿಸಿ ಮುಖ್ಯಸ್ಥರಾದ ಜಯ್ ಶಾ ಇವರ ವಿರುದ್ಧ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಇದರ ಸಂಪೂರ್ಣ ಹೊಣೆಯನ್ನು ಈ ಸಮಿತಿಗಳೇ ವಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ನಿಯೋಗ ಏಕ ಸದಸ್ಯ ತನಿಖಾ ಆಯೋಗಕ್ಕೆ ದೂರು ನೀಡಿದೆ.‌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ಮನೋಹರ್ ನೇತೃತ್ವದಲ್ಲಿ ಕೆಪಿಸಿಸಿ ನಿಯೋಗ ಕಾಲ್ತುಳಿತ ದುರಂತ ಸಂಬಂಧ ತನಿಖೆಗಾಗಿ ರಚಿಸಲಾದ ಏಕ ಸದಸ್ಯ ಆಯೋಗಕ್ಕೆ ದೂರು ನೀಡಿದರು. ದೂರಿನಲ್ಲಿ ಜೂ. 4 ರಂದು ಬೆಂಗಳೂರು ನಗರದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ಜನತಾ ಪಕ್ಷ ಹಾಗೂ ಜನತಾದಳ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಜನರ ಭಾವನೆಯನ್ನು ಕೆರಳಿಸುವಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಮಾಹಿತಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಬಿಸಿಸಿಐ ಹಾಗೂ ಐಸಿಸಿ ಸಮಿತಿಗಳ ನಿರ್ಲಕ್ಷ್ಯದಿಂದಲೂ ಈ ದುರ್ಘಟನೆ ಸಂಭವಿಸಿರುವುದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರನ್ನು ಸಲ್ಲಿಸಿದ್ದಾರೆ.

ಇದೇ ತಿಂಗಳು 3-06-2025 ರಂದು ಗುಜರಾತ್ ನಲ್ಲಿ ನಡೆದ ಐಪಿಎಲ್ ನ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಆರ್‌ಸಿಬಿ ತಂಡ ಪಂದ್ಯವನ್ನು ಗೆದ್ದಿತ್ತು. ಆ ದಿನ ರಾತ್ರಿ ಇಡೀ ಬೆಂಗಳೂರು ನಗರದ ಜನತೆ ವಿಜಯೋತ್ಸವನ್ನು ಆಚರಿಸಿ ಸುಮಾರು ಬೆಳಗಿನಜಾವ ಮೂರ್ನಾಲ್ಕು ಗಂಟೆವರೆಗೂ ಜನರು ವಿಜಯೋತ್ಸವವನ್ನು ಆಚರಿಸಿದ್ದರು. ಲಕ್ಷಾಂತರ ಜನರು ಈ ವಿಜಯೋತ್ಸವದಲ್ಲಿ ಭಾಗವಹಿಸಿದ್ದರೂ ಸಹ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ಹಾಗೆ ಸೂಕ್ತ ಬಂದೋಬಸ್ತ್ ಕ್ರಮವನ್ನು ಕೈಗೊಳ್ಳಲಾಗಿತ್ತು. 4-06-2025 ರಂದು ಆರ್‌ಸಿಬಿ ತಂಡ ದಿಢೀರ್ ಆಗಿ ಬೆಂಗಳೂರು ನಗರಕ್ಕೆ ಆಗಮಿಸಿರುವುದು ಈ ದುರ್ಘಟನೆಗೆ ಮೂಲ ಕಾರಣ. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆಗೆ ಕೆ.ಎಸ್.ಸಿ.ಎ., ಆರ್‌ಸಿಬಿ ಪ್ರಾಯೋಜಕರು ಹಾಗೂ ಇದರಿಂದ ತೆರಿಗೆ ಲಾಭ ಪಡೆಯುತ್ತಿರುವ ಸಂಸ್ಥೆಗಳೇ ಜವಾಬ್ದಾರರು ಎಂದು ಆರೋಪಿಸಿದೆ‌. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅಂಶವನ್ನು ಬಿಜೆಪಿ, ಜೆಡಿಎಸ್ ಪಕ್ಷದ ವತಿಯಿಂದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಮಾಹಿತಿಯನ್ನು ನೀಡಿ ಪ್ರಚೋದಿಸಿದ್ದಾರೆ. ಇದರಿಂದ ಇಂತಹ ದುರ್ಘಟನೆಗೆ ಹಾಗೂ ಸಾವಿಗೆ ಅವರ ಟ್ವಿಟರ್ ಸಂದೇಶವೇ ಮೂಲ ಕಾರಣ. ಬಿಜೆಪಿ ಹಾಗೂ ಜೆಡಿಎಸ್ ನ ಸಾಮಾಜಿಕ ಜಾಲತಾಣದಲ್ಲಿ ಅಳವಡಿಸಿರುವ ಮಾಹಿತಿಯನ್ನು ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರಿಗೆ ಮಾಹಿತಿಯನ್ನು ನೀಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ದೂರನ್ನು ನೀಡಿದ್ದೇವೆ ಎಂದಿದೆ.

Category
ಕರಾವಳಿ ತರಂಗಿಣಿ