ಚಿಕ್ಕಬಳ್ಳಾಪುರ: ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ನಂದಿಬೆಟ್ಟದಲ್ಲಿ ಜೂನ್ 19 ರಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯುತ್ತಿದೆ. ವಿಶೇಷವಾಗಿ ಪ್ರವಾಸಿಗರ ಮೆಚ್ಚಿನ ತಾಣವಾದ ನಂದಿಬೆಟ್ಟದಲ್ಲಿ ಸಚಿವ ಸಂಪುಟದ ಸಭೆ ಎಲ್ಲರ ಗಮನ ಸಳೆದಿದೆ. ಬೆಟ್ಟದಲ್ಲಿನ ಪ್ರವಾಸೋದ್ಯಮ ಇಲಾಖೆಯ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ (KSTDC) ಮಯೂರ ಪೈನ್ ಟಾಪ್ ರೆಸ್ಟೋರೆಂಟ್ನಲ್ಲಿ ಸಭೆ ನಡೆಯಲಿದ್ದು, ಮೂಲಭೂತ ಸೌಕರ್ಯಗಳನ್ನು ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಸ್ಥಳೀಯ ಶಾಸಕರಾದ ಪ್ರದೀಶ್ ಈಶ್ವರ್ ಮಾತನಾಡಿ, ಆ ಹಿಂದೆ ಯಾವತ್ತು ನಡೆಯದ ಸಚಿವ ಸಂಪುಟ ಸಭೆ ಇವತ್ತು ನಡೆಯುತ್ತಿರುವುದಕ್ಕೆ ನಾವು ಮುಖ್ಯಮಂತ್ರಿಗಳನ್ನು ಮನವೊಲೈಸುವಲ್ಲಿ ಯಶಸ್ವಿಯಾಗಿದ್ದೇವೆ. ಸಚಿವ ಸಂಪುಟ ಸಭೆಯಿಂದ ಇಲ್ಲಿನ ಮೂರು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೆಚ್ಚಿನ ಅನುದಾನ ಬರಲಿದೆ. ಈ ವೇಳೆ ನಮ್ಮ ಬೇಡಿಕೆಗಳನ್ನು ಮೂಂದಿಡಲಾಗುವುದು, 150 ಕೋಟಿ ಹೂವಿನ ಮಾರುಕಟ್ಟೆಗೆ, ಜಕ್ಕಲಮಡಗು ಡ್ಯಾಂ ಎತ್ತರವನ್ನ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವ ಸಂಪುಟದ ಮೂಂದಿಡಲಾಗುತ್ತದೆ ಎಂದರು. ಜೂನ್ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮೊದಲಿಗೆ ಭೋಗನಂದಿಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅನಂತರ ನಂದಿಬೆಟ್ಟದಲ್ಲಿ ಸಚಿವರ ಫೋಟೋ ಸೇಷನ್ ನಡೆಯಲಿದೆ. ಇದಾದ ನಂತರ ಸಚಿವ ಸಂಪುಟ ಸಭೆ ನಡೆಯಲಿದೆ.
ಜೂನ್ 19 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಸರ್ಕಾರದವತಿಯಿಂದ ಐತಿಹಾಸಿಕ ಸಚಿವ ಸಂಪುಟ ಸಭೆ ಏರ್ಪಡಿಸಲಾಗಿದ್ದು, ಈ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪರವರು ಅಧಿಕಾರಗಳೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಸಭೆ ನಡೆಸಿದರು. ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ, ಜಿಲ್ಲೆಗೆ ಕಾವೇರಿ ನೀರು ಪೂರೈಕೆ, ಮೆಟ್ರೋ, ಎಸ್ಟಿಪಿ ಮತ್ತು ಯುಜಿಡಿ ಕಾಮಗಾರಿಗೆ ಅನುದಾನ, ಜಿಲ್ಲಾಸ್ಪತ್ರೆಗೆ ಅನುದಾನ, ರಸ್ತೆಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ, ಜಿಲ್ಲಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ, ಬ್ಲಡ್ ಬ್ಯಾಂಕ್, ರೇಷ್ಮೆ ಸೀರೆ ಮಾರ್ಕೆಟಿಂಗ್ ಕಾಂಪ್ಲೆಕ್ಸ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು, ದೇವನಹಳ್ಳಿ ಪುರಸಭೆಯನ್ನು, ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು, ಮೆಡಿಕಲ್, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಕಾಲೇಜು, ಟ್ರಾಮಾ ಕೇರ್ ಸೆಂಟರ್, ಎತ್ತಿನಹೊಳೆ ಯೋಜನೆ ಸೇರಿದಂತೆ ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಕುರಿತು ಸಭೆಯಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.