ಶಿವಮೊಗ್ಗ: "ಕ್ಯಾನ್ಸರ್ನಿಂದ ಬಳಲುತ್ತಿರುವ ಮಕ್ಕಳಿಗೆ ಪ್ರತ್ಯೇಕ ಶಾಲೆ ಆರಂಭಿಸುತ್ತಿದ್ದೇವೆ. ಇದನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಬಳಿಯೇ ಪ್ರಾರಂಭಿಸಬೇಕು ಎಂದುಕೊಂಡಿದ್ದೇವೆ. ಇಲ್ಲಿ ಚಿಕಿತ್ಸೆಯ ಜೊತೆಗೆ ಶಿಕ್ಷಣವನ್ನು ಸಹ ನೀಡಲಾಗುತ್ತದೆ" ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲಾ ಸಚಿವರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, "ಶಿಕ್ಷಣದಲ್ಲಿ ಮಕ್ಕಳಿಗೆ ಗುಣಮಟ್ಟ, ಸಮಾನತೆ ಮತ್ತು ಲಭ್ಯತೆ ಇರಬೇಕೆಂದು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಎನ್ಜಿಓ ಜೊತೆ ಸೇರಿ ಈ ಯೋಜನೆ ಹಮ್ಮಿಕೊಳ್ಳುತ್ತಿದ್ದೇವೆ. ಸದ್ಯ ನಮ್ಮ ರಾಜ್ಯದಲ್ಲಿ 3,500 ಮಕ್ಕಳಿಗೆ ಕ್ಯಾನ್ಸರ್ ಇರಬಹುದು ಎಂದು ಅಂದಾಜಿಸಲಾಗಿದೆ. ನಮಗೆ 1,500 ಮಕ್ಕಳು ಸಿಗಬಹುದು ಎಂಬ ನಿರೀಕ್ಷೆ ಇದೆ. 1ರಿಂದ 10ನೇ ತರಗತಿ ವರೆಗೂ ಶಾಲೆ ಆರಂಭ ಮಾಡುತ್ತಿದ್ದೇವೆ. ಇದು ಜಾರಿಯಾದಾಗ ತೃಪ್ತಿ ಸಿಗಬಹುದು. ಇದಕ್ಕೆ ಸಿಎಂ ಸಹ ನಮಗೆ ಬೆಂಬಲ ನೀಡಿದ್ದಾರೆ. ಈ ಜುಲೈನಿಂದಲೇ ಶಾಲೆ ಪ್ರಾರಂಭಿಸಬೇಕೆಂಬ ಯೋಚನೆಯಿದೆ" ಎಂದರು.