ಬೆಂಗಳೂರು: "16ನೇ ಹಣಕಾಸು ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಗೆ ಜೊತೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದೆಹಲಿಯಲ್ಲಿ 16ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "16ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. 2011-2012ರಲ್ಲಿ ಕರ್ನಾಟಕ ರಾಜ್ಯವು ಜಿಡಿಪಿಗೆ ಶೇ 7ರಷ್ಟು ಕೊಡುಗೆ ನೀಡಿದ್ದರೆ, 2024-25ರಲ್ಲಿ ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದೆ'' ಎಂದು ತಿಳಿಸಿದರು.
"ಜಿಎಸ್ಟಿ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 5ರಷ್ಟಿದ್ದೇವೆ. 5 ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚನೆಯಾಗುತ್ತದೆ. ಸಂವಿಧಾನದ ಅನುಚ್ಛೇದ 180 ಪ್ರಕಾರ ತೆರಿಗೆ ಹಂಚಿಕೆಯಾಗಬೇಕೆಂದು ಹೇಳಲಾಗಿದ್ದು, ಯಾರಿಗೂ ಅನ್ಯಾಯವಾಗಬಾರದೆಂದು ಸ್ಪಷ್ಟಪಡಿಸಿದೆ" ಎಂದರು. "ಕರ್ನಾಟಕ ರಾಜ್ಯ ಪ್ರತಿ ವರ್ಷ 4.5 ಲಕ್ಷ ಕೋಟಿ ತೆರಿಗೆ ನೀಡುತ್ತದೆ. ಒಂದು ರೂ.ಗಳು ನೀಡಿದರೆ 15 ಪೈಸೆ ನಮಗೆ ವಾಪಸ್ಸು ಬರುತ್ತದೆ. ಈ ಅನ್ಯಾಯ 16ನೇ ಹಣಕಾಸು ಆಯೋಗದಲ್ಲಿ ಆಗಬಾರದು. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು 4.713%ಕ್ಕೆ ಮತ್ತು 15ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು 3.647% ಕ್ಕೆಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು ಒಟ್ಟಾರೆ 23%ರಷ್ಟು ಇಳಿಕೆ ಮಾಡಲಾಗಿದೆ. 5 ವರ್ಷಗಳಲ್ಲಿ ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ" ಎಂದು ಮಾಹಿತಿ ನೀಡಿದರು.
"ಇದರೊಂದಿಗೆ ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ನಲ್ಲಿ ನಮಗೆ ಮಾತ್ರವಲ್ಲ ಯಾವ ರಾಜ್ಯಕ್ಕೂ ಪಾಲು ಕೊಡುವುದಿಲ್ಲ. ಕರ್ನಾಟಕದಿಂದ 2024-25ರಲ್ಲಿ ಒಟ್ಟು 5,41,709 ಕೋಟಿ ರೂ. ಸಂಗ್ರಹವಾಗಿದೆ. 8,084 ಕೋಟಿ ರೂ.ಗಳು ಕರ್ನಾಟಕ್ಕೆ ನಷ್ಟವಾಗಿದೆ. ಸೆಸ್ ಮತ್ತು ಸರ್ಚಾರ್ಜ್ ಶೇ.5ರಷ್ಟನ್ನು ಮೀರಬಾರದು, ಒಂದು ವೇಳೆ 5% ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ.50ರಷ್ಟು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾದರೆ ಕೇಂದ್ರ ಸರ್ಕಾರದ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ನ್ಯಾಯಯುತವಾಗಿ ಹಂಚಿಕೆಯಾಗಬೇಕು ಎಂದು ಕೋರಲಾಗಿದೆ" ಎಂದರು.