image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೇಘಸ್ಪೋಟದಿಂದ ತತ್ತರಿಸಿದ ಕಾರವಾರದಲ್ಲಿ ನೂರಾರು ಮನೆಗಳು ಜಲಾವೃತ

ಮೇಘಸ್ಪೋಟದಿಂದ ತತ್ತರಿಸಿದ ಕಾರವಾರದಲ್ಲಿ ನೂರಾರು ಮನೆಗಳು ಜಲಾವೃತ

ಉತ್ತರ ಕನ್ನಡ : ಜಿಲ್ಲೆಯ ಕರಾವಳಿಯಲ್ಲಿ ಮೇಘಸ್ಫೋಟಗೊಂಡಿದ್ದು, ಒಂದೇ ದಿನದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಾರವಾರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು, ನೂರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕಾರವಾರದಲ್ಲಿ ಸುರಿದ ಧಾರಾಕಾರ ಮಳೆ ಗುರುವಾರವೂ ಮುಂದುವರೆಯಿತು. ಕಾರವಾರ ಹಬ್ಬುವಾಡ ರಸ್ತೆ ಸಂಪೂರ್ಣ ನದಿಯಂತಾಗಿದೆ. ನಗರದ ಎಂಜಿ ರಸ್ತೆ, ಹಿಂದೂ ಹೈಸ್ಕೂಲ್ ಮುಂಭಾಗ, ಗೀತಾಂಜಲಿ ಚಿತ್ರಮಂದಿರ ಬಳಿ, ಹೈ ಚರ್ಚ್ ಸುತ್ತಮುತ್ತಲಿನ ರಸ್ತೆ, ಕೋಡಿಭಾಗದ ಸಾಯಿಕಟ್ಟಾದ ರಸ್ತೆಯಲ್ಲಿ ಚರಂಡಿಗಳು ಉಕ್ಕಿ ಹರಿದ ಕಾರಣ ಈ ಭಾಗದ ಮನೆ ಅಂಗಡಿ ದೇವಸ್ಥಾನಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ನಗರದ ಡೋಬಿ ಘಾಟ್ ರಸ್ತೆಯಲ್ಲಿರುವ ಸಾಯಿ ಮಂದಿರದ ಬಳಿ ಗುಡ್ಡ ಕುಸಿದು ದೊಡ್ಡ ದೊಡ್ಡ ಕಲ್ಲುಬಂಡೆಗಳು ಉರುಳಿ ಬಿದ್ದಿದ್ದು, ಮತ್ತಷ್ಟು ಭೂಕುಸಿತದ ಆತಂಕವನ್ನು ಸೃಷ್ಟಿಸಿದೆ. ಇತ್ತೀಚೆಗೆ ಜಿ.ಎಸ್.ಐ. ವಿಜ್ಞಾನಿಗಳು ಕಾರವಾರ ಸೇರಿದಂತೆ ಒಟ್ಟು 21 ಕಡೆ ಭೂಕುಸಿತದ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಘಟನೆ ಜನರಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ. "ನಗರದ ಕೋಡಿಬೀರ ದೇವಸ್ಥಾನದ ಬಳಿ 6 ಮನೆಗಳು ಮುಳುಗಡೆಯಾಗಿದೆ. ಗುರುವಾರ ಸಂಜೆಯಾದರೂ ಮಳೆ ನೀರು ಇಳಿದಿರಲಿಲ್ಲ. ನೀರು ತುಂಬಿಕೊಂಡಿರುವ ಮನೆಗಳಿಂದ ವೃದ್ದರನ್ನು, ಮಕ್ಕಳನ್ನು ರಾತ್ರೋ ರಾತ್ರಿ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಿದ್ದೇವೆ. ಮನೆಯಲ್ಲಿದ್ದ ಫ್ರಿಜ್​, ಟಿವಿ, ಅಕ್ಕಿ ಬೇಳೆ, ಹಾಸಿಗೆ ಎಲ್ಲವೂ ನೀರುಪಾಲಾಗಿದೆ. ಅಕ್ಕಪಕ್ಕದ ಮನೆಯವರು ತಿಂಡಿ ನೀಡಿದ್ದಾರೆ. ಮಳೆ ನೀರು ಇಳಿಯುತ್ತಿಲ್ಲ. ನಮಗೆ ಎಲ್ಲಿಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ. ಇಷ್ಟೊಂದು ಅವಾಂತರವಾದರೂ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾರೊಬ್ಬರು ಆಗಮಿಸಿಲ್ಲ" ಎಂದು ನೀರು ನುಗ್ಗಿದ ಮನೆಯ ಮಹಿಳೆ ರೀಟಾ ಫರ್ನಾಂಡಿಸ್ ಅಸಮಾಧಾನ ವ್ಯಕ್ತಪಡಿಸಿದರು.

ಕಾರವಾರದ ಜಿಲ್ಲಾ ರಂಗಮಂದಿರದ ಹಿಂಬಾಗ ರಸ್ತೆಯಲ್ಲಿ ನಾಲ್ಕೈದು ಅಡಿಗಳಷ್ಟು ನೀರು ತುಂಬಿಕೊಂಡಿರುವಾಗ ಕಾರು ಚಲಾಯಿಸಿಕೊಂಡ ಬಂದು ದಾರಿ ಕಾಣದೆ ಕಾರೊಂದು ಕಾಲುವೆಗೆ ಬಿದ್ದಿದ್ದು ಡ್ರೈವರ್ ಹಾಗೂ ಕಾರನ್ನು ಜೆಸಿಬಿ ಬಳಸಿ ತಡರಾತ್ರಿ ಮೇಲೆ ಎತ್ತಲಾಗಿದೆ. ಅಂಕೋಲಾ ಮೂಲದ ಕಾರು ಎನ್ನಲಾಗಿದೆ.ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಗರದ ಹಿಂದೂ ಹೈಸ್ಕೂಲ್​ ರಸ್ತೆ, ಬಿಣಗಾ ಟನಲ್, ಕೆಇಬಿ ಸಬ್​ ಸ್ಟೇಶನ್ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿದರು. ಈ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ನೀರು ನಿಲುಗಡೆಯ ಸಮಸ್ಯೆಗಳ ಕುರಿತಂತೆ ಪರಿಶೀಲಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Category
ಕರಾವಳಿ ತರಂಗಿಣಿ