ಹೈದರಾಬಾದ್: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ನಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. 7 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡಿದ್ದಲ್ಲದೇ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದೇಶದಲ್ಲಿಯೇ ಭಾರೀ ಸಂಚಲನ ಉಂಟು ಮಾಡಿದ್ದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6 ರಂದು ಸಿಬಿಐ ವಿಶೇಷ ನ್ಯಾಯಾಲಯವು ಗಾಲಿ ಜನಾರ್ದನರೆಡ್ಡಿ ಸೇರಿದಂತೆ ನಾಲ್ವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಮತ್ತು ಇತರರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಮನವಿಯನ್ನು ಅಂಗೀಕರಿಸಿರುವ ತೆಲಂಗಾಣ ಹೈಕೋರ್ಟ್, ಸಿಬಿಐ ವಿಶೇಷ ಕೋರ್ಟ್ ನೀಡಿದ ಶಿಕ್ಷೆಯನ್ನು ಇಂದಿನ ವಿಚಾರಣೆಯಲ್ಲಿ (ಜೂನ್ 11) ಅಮಾನ್ಯ ಮಾಡಿತು. ಇದರಿಂದ ಜೈಲು ಪಾಲಾಗಿದ್ದ ರೆಡ್ಡಿ ಸೇರಿದಂತೆ ನಾಲ್ವರು ಬಿಡುಗಡೆ ಭಾಗ್ಯ ಕಂಡಿದ್ದಾರೆ. ಸಿಬಿಐ ಕೋರ್ಟ್ನ ಶಿಕ್ಷೆಯನ್ನು ಮಾತ್ರ ರದ್ದು ಮಾಡಲಾಗಿದ್ದು, ಪ್ರಕರಣವು ಹೈಕೋರ್ಟ್ನಲ್ಲಿ ಮುಂದುವರಿಯಲಿದೆ. ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿತರಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡುವಾಗ ಹೈಕೋರ್ಟ್ ಮೂರು ಷರತ್ತುಗಳನ್ನು ವಿಧಿಸಿದೆ. 10 ಲಕ್ಷ ರೂಪಾಯಿಗಳ ಎರಡು ಶ್ಯೂರಿ ಬಾಂಡ್, ವಿದೇಶಕ್ಕೆ ತೆರಳುವಂತಿಲ್ಲ, ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದೆ.
ಆಂಧ್ರಪ್ರದೇಶಕ್ಕೆ ಸೇರಿದ, ಕರ್ನಾಟಕದ ಗಡಿ ಭಾಗದಲ್ಲಿರುವ ಓಬಳಾಪುರಂ ಗ್ರಾಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ನಡೆಸಿದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕಂಪನಿಯು ನಿಯಮ ಉಲ್ಲಂಘಿಸಿ, ಅದಿರಿಗಾಗಿ ಕರ್ನಾಟಕ- ಆಂಧ್ರ ನಡುವಿನ ಗಡಿ ರೇಖೆಯನ್ನೇ ಬದಲಿಸಿದ ಆರೋಪವಿದೆ. ಜನಾರ್ದನರೆಡ್ಡಿ ಅವರಿಗೆ ಸಿಬಿಐ ಕೋರ್ಟ್ 7 ವರ್ಷ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಅವರ ಶಾಸಕತ್ವ ಅನರ್ಹವಾಗಿತ್ತು. ಇದೀಗ, ಶಿಕ್ಷೆಯೇ ರದ್ದಾಗಿದ್ದರಿಂದ ಶಾಸಕ ಸ್ಥಾನ ಮರಳಲಿದೆ. ರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕರಾಗಿದ್ದಾರೆ.