image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಅಸಾಂವಿಧಾನಿಕ : ಹೈಕೋರ್ಟ್​ಗೆ ಅರ್ಜಿ

ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಅಸಾಂವಿಧಾನಿಕ : ಹೈಕೋರ್ಟ್​ಗೆ ಅರ್ಜಿ

ಬೆಂಗಳೂರು : 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2025' ಅನ್ನು ಸಂವಿಧಾನ ಬಾಹಿರ ಎಂದು ಘೋಷಿಸುವಂತೆ ಕೋರಿ ಸಿನಿಮಾ ನಿರ್ದೇಶಕ ಟಿ.ಎಸ್. ನಾಗಾಭರಣ ಮತ್ತಿತರರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯು ಸಂವಿಧಾನದ 74ನೇ ತಿದ್ದುಪಡಿ ಮಾಡಿ ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈ ಕಾಯ್ದೆ ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆ ಆಗಲು ಸಾಧ್ಯವಿಲ್ಲ. ಚುನಾಯಿತ ಕೌನ್ಸಿಲರ್​ಗಳ ಅಧಿಕಾರ ಮತ್ತು ಹಕ್ಕುಗಳನ್ನು ಪ್ರಾಧಿಕಾರ ಕಡೆಗಣಿಸುತ್ತದೆ. ಚುನಾಯಿತರಲ್ಲದ ವ್ಯಕ್ತಿಗಳಿಗೆ ಹೆಚ್ಚಿನ ಅಧಿಕಾರ ಸಿಗಲಿದೆ. ಇದು ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಸರ್ಕಾರಗಳ ಬಲವರ್ಧನೆಯ ತತ್ವಕ್ಕೆ ಪೆಟ್ಟುಕೊಡಲಿದೆ. ಬೆಂಗಳೂರಿನ ಆಡಳಿತ ಮತ್ತು ನಿರ್ವಹಣೆಯನ್ನು ನೇರವಾಗಿ ಸರ್ಕಾರದ ಹತೋಟಿಗೆ ತೆಗೆದುಕೊಳ್ಳುವ ಹುನ್ನಾರದಿಂದ ಈ ಪ್ರಾಧಿಕಾರ ರಚನೆ ಮಾಡಲಾಗಿದೆ. ಪ್ರಾಧಿಕಾರ ರಚನೆಯಿಂದ ಚುನಾವಣೆ ಸಹ ವಿಳಂಬವಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2025 ಅನ್ನು ಸಂವಿಧಾನ ಬಾಹಿರ ಎಂದು ಘೋಷಿಸಬೇಕು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ರಾಜಧಾನಿಯಲ್ಲಿ ಉತ್ತಮ ಆಡಳಿತ ಹಾಗೂ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ವಿವಿಧ ಸಂಸ್ಥೆಗಳ ಮಧ್ಯೆ ಸಮನ್ವಯಕ್ಕಾಗಿ ರೂಪಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ, ಗರಿಷ್ಠ 7 ನಗರ ಪಾಲಿಕೆಗಳನ್ನು ರಚಿಸುವ ಕುರಿತು 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ' ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಸಮನ್ವಯ ಮತ್ತು ಮೇಲ್ವಿಚಾರಣೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆ, ಗರಿಷ್ಠ 7 ನಗರ ಪಾಲಿಕೆಯಾಗಿ ವಿಭಜಿಸುವ ಅವಕಾಶವಿದೆ. ವಾರ್ಡ್‌ ಸಮಿತಿಗಳನ್ನು ನಗರಾಡಳಿತದ ಮೂಲ ಘಟಕಗಳನ್ನಾಗಿಸುವುದೂ ಸೇರಿದಂತೆ ಹಲವು ವಿಷಯಗಳು ಈ ವಿಧೇಯಕದಲ್ಲಿ ಪ್ರಸ್ತಾಪವಾಗಿವೆ.

Category
ಕರಾವಳಿ ತರಂಗಿಣಿ