ರಾಯಚೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಸುಮಾರು 15 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಗಂಗಾನಿವಾಸ ಹಾಗೂ ಟ್ಯಾಂಕ್ ಬಂಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದ್ದರಿಂದ ಹುಚ್ಚುನಾಯಿ ಕಡಿತ ಶಂಕೆ ಎದುರಾಗಿದ್ದು, ಗಾಯಾಳುಗಳು ಆತಂಕಗೊಂಡಿದ್ದಾರೆ. ಓರ್ವ ಬಾಲಕ ಸೇರಿದಂತೆ ಗಾಯಗೊಂಡ ಎಂಟು ಜನರನ್ನು ನಗರದ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.
ಸಿಕ್ಕಸಿಕ್ಕವರ ಕೈ, ಕಾಲಿಗೆ ಹಾಗೂ ಮೈ ಮೇಲೆ ಎಗರಿ ಗಾಯಗೊಳಿಸಿವೆ. ಲಿಂಗಪ್ಪ, ಶರಣಪ್ಪ, ರಮೇಶ್, ಮೊಹಮದ್ ಗೌಸ್ ಸೇರಿ 15 ಜನರು ಗಾಯಗೊಂಡಿದ್ದು, ಪಾಲಿಕೆ ವಿರುದ್ದ ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಕ್ ಸವಾರರು, ವಿದ್ಯಾರ್ಥಿಗಳು ಮತ್ತು ಪಾದಚಾರಿಗಳ ಮೇಲೆ ನಾಯಿಗಳ ಹಿಂಡು ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.