ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಮಂದಿ ದುರ್ಮರಣ ಹೊಂದಿದ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಆದೇಶ ರದ್ದುಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಇಂಡಿಯನ್ ಪೊಲೀಸ್ ಫೌಂಡೇಶನ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಕಪ್ ಗೆದ್ದ ಬಳಿಕ ಆರ್ಸಿಬಿ ಆಟಗಾರರಿಗೆ ಅಭಿನಂದನಾ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ವಿಧಾನಸೌಧದ ಎದುರು ಆಯೋಜಿಸಿತ್ತು. ಕಾರ್ಯಕ್ರಮ ಆಯೋಜನೆಗೂ ಮುನ್ನ ಪೂರ್ವ ತಯಾರಿಗೆ ಸಮಯಾವಕಾಶ ಬೇಕೆಂದು ಪೊಲೀಸರು ತಿಳಿಸಿದ್ದರು. ಈ ಮಧ್ಯೆ ಆರ್ಸಿಬಿ ಮ್ಯಾನೇಜ್ಮೆಂಟ್ ಕಡೆಯಿಂದ ವಿಕ್ಟರಿ ಪರೇಡ್ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಸಾಕಷ್ಟು ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.
ಇದು ಪೂರ್ವ ತಯಾರಿ ಇಲ್ಲದೆ, ಏಕಾಏಕಿ ಅಭಿಮಾನಿಗಳಿಗೆ ಸ್ಟೇಡಿಯಂಗೆ ಬರುವಂತೆ ಆಹ್ವಾನಿಸಿತ್ತು. ಆರಂಭದಲ್ಲೇ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದರು. ಊಹೆಗೂ ಮೀರಿದ ಜನ ಕಾರ್ಯಕ್ರಮಗಳಿಗೆ ಬಂದಿದ್ದರಿಂದ ಪೊಲೀಸರಿಗೆ ಬಂದೋಬಸ್ತ್ ವೇಳೆ ಕಷ್ಟವಾಗಿದೆ. ಹೀಗಾಗಿ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕು ಎಂದು ಪತ್ರದಲ್ಲಿ ಸಿಎಂಗೆ ಮನವಿ ಮಾಡಲಾಗಿದೆ.