ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಕಾರಣವೆಂದ ಬಿಜೆಪಿ ನಾಯಕರು, ಇಂದು ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. 11 ಜನರನ್ನು ಬಲಿ ತೆಗೆದುಕೊಂಡ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸರ್ಕಾರದ ವಿರುದ್ಧ ಭಿತ್ತಿಪತ್ರಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಘೋಷಣೆ ಕೂಗಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, "ಇದು ದರಿದ್ರ ಸರ್ಕಾರ. ನಾವಿಲ್ಲಿ 40 ಜನ ಪ್ರತಿಭಟನೆ ಮಾಡುತ್ತಿದ್ದೇವೆ. ಪೊಲೀಸರು 150 ಜನ ಬಂದಿದ್ದಾರೆ, ಗನ್ಗಳನ್ನು ತಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ, ನಮ್ಮನ್ನು ಬಂಧಿಸಬಹುದು. ವಿಸ್ಕಿ ಬಾಟಲಿ, ಆರ್‌ಸಿಬಿ ಪ್ರಮೋಷನ್ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಸಿಎಂ, ಡಿಸಿಎಂ, ಆರ್‌ಸಿಬಿ ಅಂದ್ರೆ Real Culprits of Bangalore. ಪೊಲೀಸರ ರಕ್ಷಣೆ ಯಾರು ಮಾಡ್ತಾರೆ?. ನಾವು ಪೊಲೀಸರ ಜತೆ ನಿಲ್ತೇವೆ. ಈ ಪ್ರಕರಣದಲ್ಲಿ ಪೊಲೀಸರ ಪರ ನಮ್ಮ ಹೋರಾಟ. ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾಸೌಧ ಡಿಸಿಪಿ ಕ್ಲೀನಾಗಿ ಪತ್ರ ಬರೆದಿದ್ದಾರೆ. ಸಿಬ್ಬಂದಿ ಇಲ್ಲ ಅಂದ್ರೂ ಹೇಗೆ ಕಾರ್ಯಕ್ರಮ ಮಾಡಿದ್ರಿ" ಎಂದು ಪ್ರಶ್ನಿಸಿದರು.
"ಒಬ್ಬ ಪೊಲೀಸ್ ಅಧಿಕಾರಿ ಆಗಲ್ಲ ಅಂದ್ಮೇಲೂ ನೀನು ಹೇಗಯ್ಯ ಕಾರ್ಯಕ್ರಮ ಮಾಡಿದೆ?. ಯಾವ ಕಾನೂನು ಅಡಿ ಕಾರ್ಯಕ್ರಮ ಮಾಡಿದೆ?" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, "ಸಿ.ಟಿ.ರವಿ ತಪ್ಪೇ ಮಾಡಿಲ್ಲ. ಏನೂ ಮಾತಾಡದಿದ್ರೂ ಅವ್ರನ್ನು ಕ್ವಾರಿ, ಇಟ್ಟಿಗೆ ಫ್ಯಾಕ್ಟರಿ, ಕಬ್ಬಿನ ಗದ್ದೆ ಎಲ್ಲ ಸುತ್ತಿಸಿದ್ರಿ. ಈಗ ನೀವು 11 ಜನರ ಮರ್ಡರ್ ಮಾಡಿದ್ದೀರಿ?. ನಿಮ್ಮನ್ನು ಯಾವ ಕಬ್ಬಿನ ಗದ್ದೆಗೆ ಕರ್ಕೊಂಡ್ ಹೋಗಬೇಕು ಹೇಳಿ. ಮೊದಲ ಸಾವು ಸಂಜೆ 3.15ಕ್ಕೆ ಆಯ್ತು. ಇವರು ಕಾರ್ಯಕ್ರಮ ಮಾಡಿದ್ದು ಸಂಜೆ 4.30ಕ್ಕೆ. ಸಂಜೆ 6ಕ್ಕೆ ಡಿಸಿಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗ್ತಾರೆ. ಅಲ್ಲಿ ರಘು ದಿಕ್ಷೀತ್ ಕಾರ್ಯಕ್ರಮ ಇತ್ತು. ನಂತರ ಒಂದು ಕೋಟಿ ಮೌಲ್ಯದ ಪಟಾಕಿ ಹೊಡೀತಾರೆ. ಮಾನವೀಯತೆ ಇಲ್ವಾ? ನಿಮಗೆ ಜ್ಞಾನ ಇಲ್ವಾ?" ಎಂದು ಟೀಕಿಸಿದರು.
"ಪೊಲೀಸರು ಸಾವಿನ ಬಗ್ಗೆ ಹೇಳಲಿಲ್ಲ ಅಂತಾರೆ ಸಿಎಂ. ನಿಮ್ಮ ಅಧಿಕಾರಿಗಳು ಮಣ್ಣು ತಿಂತಿದ್ರಾ?. ಟಿವಿಗಳಲ್ಲಿ ಕ್ಷಣ ಕ್ಷಣಕ್ಕೂ ನ್ಯೂಸ್ ಬರುತ್ತಿತ್ತಲ್ಲ?. ಈ ಸರ್ಕಾರ ವಜಾ ಆದ್ರೆ ಮಾತ್ರ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸತ್ತವರು ಹುತಾತ್ಮರು, ಹೆಣಗಳಲ್ಲ. ನೀವು ಕರೆದ್ರಿ, ಅವರನ್ನು ಆಹ್ವಾನಿಸಿ ಸಾಯಿಸಿದ್ರಿ. ನಾಳೆ ರಾಜ್ಯಪಾಲರನ್ನು ಭೇಟಿ ಮಾಡ್ತೇವೆ. ಸರ್ಕಾರದ ವಜಾ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ" ಎಂದರು.
"ಆರ್‌ಸಿಬಿಯಲ್ಲಿ ಸಿಎಂ, ಡಿಸಿಎಂ ಬಂಡವಾಳ ಹೂಡಿದ್ದಾರಾ?. ಪೊಲೀಸರು ಲಿಖಿತವಾಗಿ ಹೇಳಿದ್ರು ವಿಜಯೋತ್ಸವ ಯಾಕೆ ಮಾಡಿದ್ರಿ?. ಕಮೀಷನರ್ ಅನುಮತಿ ಕೊಟ್ಟಿದ್ರಾ?. ಗಾಯಾಳುಗಳನ್ನು ಹೊತ್ಕೊಂಡಿದ್ದವರು ಪೊಲೀಸರು. ನೀವೆಲ್ಲಿ ಹೋಗಿದ್ರಿ, ಒಬ್ರು ಮಸಾಲೆ ದೋಸೆ ತಿನ್ನೋಕ್ಕೆ, ಇನ್ನೊಬ್ರು ಕಪ್‌ಗೆ ಮುತ್ತು ಕೊಡಲು ಹೋಗಿದ್ರಿ. ನಿಮ್ಮಿಬ್ಬರ ನಡುವೆ ಕ್ರೆಡಿಟ್ ವಾರ್ ನಡೀತಿದೆ. ದುರಂತದ ನ್ಯಾಯಾಂಗ ತನಿಖೆ ಆಗಬೇಕು. ನಿಮ್ಮ ಮೇಲೆ ಎಫ್ಐಆರ್ ಬುಕ್ ಆಗಬೇಕು" ಎಂದು ಸಿ.ಟಿ.ರವಿ ಆಗ್ರಹಿಸಿದರು.