ಬೆಂಗಳೂರು: "ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರದ ಗುಣಮಟ್ಟದ ಮೇಲೆ ಕಠಿಣ ನಿಯಂತ್ರಣ ಕೈಗೊಳ್ಳಬೇಕಾಗಿದೆ. ಬೀದಿಬದಿ ಮತ್ತು ಹೋಟೆಲ್ ಆಹಾರದ ಗುಣಮಟ್ಟವನ್ನು ರಾಜ್ಯ ಮತ್ತು ಕೇಂದ್ರ ಆಹಾರ ಮತ್ತು ಔಷಧ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿಮ್ಹಾನ್ಸ್ನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. "ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟವಾಗುವ ಕಡಿಮೆ ಗುಣಮಟ್ಟದ ಆಹಾರದಿಂದ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಸಂಸ್ಥೆಗಳಿಂದ ಕಟ್ಟುನಿಟ್ಟಿನ ಜಾರಿ ಅತ್ಯಗತ್ಯ" ಎಂದರು.
"ಮಾರಾಟಗಾರರು ಆಹಾರದ ರುಚಿ ಮತ್ತು ಅದನ್ನು ಚೆಂದಗಾಣಿಸಲು ಆಗಾಗ್ಗೆ ನಿಷೇಧಿತ ಬಣ್ಣಗಳು ಮತ್ತು ರಾಸಾಯನಿಕಗಳನ್ನು ಬಳಸುತ್ತಾರೆ. ಇದು ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಮಾರಕವೂ ಆಗಿರಬಹುದು. ಬೀದಿ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಊಟ ಆಯ್ಕೆ ಮಾಡಿಕೊಳ್ಳಬೇಕು. ಯುವಕರು ಮತ್ತು ಮಕ್ಕಳು ಇದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಪೂರ್ವಜರು ಆರೋಗ್ಯಕರ ಆಹಾರ ಪದ್ಧತಿಗಳನ್ನು ಕಲಿಸಿದ್ದಾರೆ. ನಾವು ಆ ಪದ್ಧತಿಗಳಿಗೆ ಮರಳುವ ಸಮಯ ಇದಾಗಿದೆ. ಅನೈರ್ಮಲ್ಯ ಮತ್ತು ಕಲಬೆರಕೆ ಆಹಾರದಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳನ್ನು ತಡೆಗಟ್ಟಬೇಕಾಗಿದೆ" ಎಂದರು.
ಶಾಲಾ ಮಕ್ಕಳು ಮತ್ತು ಸಮುದಾಯಗಳಲ್ಲಿ ಆಹಾರ ಸುರಕ್ಷತೆ, ನೈರ್ಮಲ್ಯ ಮತ್ತು ಪೋಷಣೆಯ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಹೊರತಂದಿರುವ 'ಈಟ್ ರೈಟ್ ಆಕ್ಟಿವಿಟಿ ಬುಕ್ʼ ಅನ್ನು ಇದೇ ವೇಳೆ ಸಚಿವರು ಬಿಡುಗಡೆ ಮಾಡಿದರು.
ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ತರಬೇತಿ, ಪರೀಕ್ಷೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ 'ಫುಡ್ ಸೇಫ್ಟಿ ಆನ್ ವೀಲ್ಸ್' ಮೊಬೈಲ್ ಘಟಕವನ್ನು ಉದ್ಘಾಟಿಸಿದರು. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮತ್ತು ಇಲಾಖೆಯ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ, ಸಂಸದ ಪಿ.ಸಿ.ಮೋಹನ್ ಮತ್ತು ಲೆಹರ್ ಸಿಂಗ್ ಮತ್ತು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.