ಬೆಂಗಳೂರು: ಕಾಲ್ತುಳಿತ ಘಟನೆಯಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹಸಚಿವರು 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು' ಎಂಬಂತೆ ಬೆಂಗಳೂರು ನಗರ ಕಮಿಷನರ್ ಹಾಗೂ ಇತರ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಸರ್ಕಾರದ ನಿರ್ಲಜ್ಜ ಹಾಗೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ದುರಾಲೋಚನೆಯ ಕ್ರಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆರ್ಸಿಬಿ ವಿಜಯೋತ್ಸವದ ವೇಳೆ ಪ್ರಚಾರ ಲಾಭ ಪಡೆಯುವ ಕೆಟ್ಟ ಸ್ವಾರ್ಥದ ಫಲವಾಗಿ 11 ಅಮಾಯಕ ಜೀವಗಳ ಬಲಿಯಾಗಿದೆ. ಜನರ ಆಕ್ರೋಶ ಮುಗಿಲು ಮುಟ್ಟಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾನವೀಯತೆ ಇರುವವರ ಕರುಳು ಹಿಂಡುತ್ತಿದೆ. ಸಾವಿರಾರು ಜನರು ಸಂಕಟ ಅನುಭವಿಸಿದ್ದಾರೆ ಎಂದಿದ್ದಾರೆ.
ಯಾವುದೇ ಮಾನದಂಡವಿಲ್ಲದೆ, ವಿವೇಚನಾರಹಿತವಾಗಿ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರಚಾರದ ಲಾಭ ಪಡೆಯಬಹುದು ಎಂಬ ದುರಾಸೆಯಿಂದ ಸಿದ್ದರಾಮಯ್ಯ ಸರ್ಕಾರ ನಡೆಸಿದ ಸಂಭ್ರಮಾಚರಣೆ ಅಮಾಯಕ ಜನರನ್ನು ಬಲಿಯಾಗಿಸಿತು. ಈ ದುರಂತಕ್ಕೆ ಕಾಂಗ್ರೆಸ್ ಸರ್ಕಾರವನ್ನು ಇಂದು ಕರ್ನಾಟಕದ ಜನತೆ ದಿನವಿಡೀ ಶಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ನೈತಿಕತೆ ಮೆರೆದು ರಾಜಿನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕಾದ ಮುಖ್ಯಮಂತ್ರಿ, ಉಪ‘ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು, ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿರುವುದು ನಿಜಕ್ಕೂ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಇತಿಹಾಸಕ್ಕೆ ಕಪ್ಪು ಚುಕ್ಕಿ ಅಂಟಿಸಿದ ಕಾರಣಕ್ಕೆ ಜನರೇ ಇವರನ್ನು ಕಿತ್ತೊಗೆಯುವ ಅನಿವಾರ್ಯ ಸಂದರ್ಭ ಸಮೀಪಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.