ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನೊಳಗೆ ಹೋಗುವ ಸಾವಿರಾರು ಅಭಿಮಾನಿಗಳ ಆತುರದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ, 11 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 27 ಮಂದಿ ಗಾಯಾಳುಗಳನ್ನು ಇದುವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ನೆಚ್ಚಿನ ಆಟಗಾರರನ್ನು ಸನಿಹದಿಂದ ಕಣ್ತುಂಬಿಕೊಳ್ಳಲು ಸ್ಟೇಡಿಯಂಗೆ ಜನಸಾಗರವೇ ಹರಿದು ಬಂದಿತ್ತು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಗಾಯಗೊಂಡವರನ್ನು ಕೂಡಲೇ ಸಮೀಪದ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೆ 11 ಮಂದಿ ಸಾವನ್ನಪ್ಪಿರುವ ಶಂಕೆ ಇದ್ದು, ಇನ್ನೂ ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 19 ಗಾಯಾಳುಗಳ ಪೈಕಿ 7 ಜನ ಮೃತಪಟ್ಟರೆ, ವೈದೇಹಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 8 ಜನ ಗಾಯಾಳುಗಳ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ದುರಂತದಲ್ಲಿ 14 ವರ್ಷದ ದಿವ್ಯಾಂಶಿ ಎಂಬ ವಿದ್ಯಾರ್ಥಿನಿ ಕೂಡ ಮೃತಪಟ್ಟಿರುವ ಮಾಹಿತಿ ಇದೆ. 9ನೇ ತರಗತಿ ಓದುತ್ತಿದ್ದ ಮೃತ ದಿವ್ಯಾಂಶಿ, ಅಪ್ಪ ಶಿವಕುಮಾರ್ ಹಾಗೂ ಅಮ್ಮ ಅಶ್ವಿನಿ ಜೊತೆ ಸ್ಟೇಡಿಯಂಗೆ ಬಂದಿದ್ದಳು. ಈ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ಇದೆ. ಸುದ್ದಿ ತಿಳಿಯುತ್ತಿದ್ದಂತೆ ಬೌರಿಂಗ್ ಆಸ್ಪತ್ರೆಗೆ ಭೇಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದಕ್ಕೂ ಮುನ್ನ, ರಾಜ್ಯ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಅಭಿನಂದನಾ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ನೆರೆದಿತ್ತು. ಅಂದಾಜಿಗಿಂತ ಹೆಚ್ಚು ಜನರು ಆಗಮಿಸಿದ್ದರಿಂದ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.