ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಮ್ಯೂಸಿಯಂ ಆಫ್ ಆರ್ಟ್ ಮತ್ತು ಫೋಟೋಗ್ರಫಿ(ಎಂಎಪಿ) ಜೊತೆಗೆ ಕೈಜೋಡಿಸಿ, ಟರ್ಮಿನಲ್ 2ರಲ್ಲಿ ಪ್ರಯಾಣಿಕರಿಗೆ ವಿಶಿಷ್ಟವಾದ ಸಾಂಸ್ಕೃತಿಕ ಅನುಭವವನ್ನು ನೀಡಲು ಮುಂದಾಗಿದೆ. ವಿಮಾನ ನಿಲ್ದಾಣವನ್ನು ಸಕ್ರಿಯ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವುದು, ಮತ್ತು ಪ್ರಯಾಣಿಕರಿಗೆ ದಕ್ಷಿಣ ಏಷ್ಯಾದ ಕಲಾ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆರೆಯಲು ಅವಕಾಶವನ್ನು ನೀಡುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಟರ್ಮಿನಲ್ 2ರ ಪ್ರಮುಖ ಆಕರ್ಷಣೆ ಕಲೆಯಾಗಿದ್ದು, ಈಗಾಗಲೇ 60ಕ್ಕೂ ಹೆಚ್ಚು ಕಲಾವಿದರ 210ಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹವನ್ನು ಹೊಂದಿದೆ. ಇದೀಗ ಪ್ರಾರಂಭವಾದ ಮ್ಯೂಸಿಯಂ ಆಫ್ ಆರ್ಟ್ ಮತ್ತು ಫೋಟೋಗ್ರಫಿಯ ಸಂವಾದಾತ್ಮಕ ಕಲಾ ಸಂಗ್ರಹವು ಟರ್ಮಿನಲ್ 2ರ ಸೌಂದರ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತವೆ. ಅಲ್ಲದೇ, ಹೊಸ ಕಲಾಕೃತಿಗಳ ಸ್ಥಾಪನೆಯು ಪ್ರಯಾಣಿಕರಿಗೆ ಬಿಡುವಿನ ಸಮಯದ ಅನುಭವವನ್ನು ಹೆಚ್ಚಿಸುತ್ತವೆ.
ಪ್ರಮುಖ ಖ್ಯಾತ ಕಲಾವಿದರಾದ ಜಾಮಿನಿ ರಾಯ್, ಜಂಗರ್ ಸಿಂಗ್ ಶ್ಯಾಮ್, ಜ್ಯೋತಿ ಭಟ್,ಸುರೇಶ್ ಪಂಜಾಬಿ, ಎಲ್‌ಎನ್ ತಲ್ಲೂರ್ ಮುಂತಾದವರು ರಚಿಸಿದ ಹಲವು ಕಲಾಕೃತಿಗಳನ್ನು ಒಳಗೊಂಡ ಡಿಜಿಟಲ್ ಲೈಬ್ರರಿಯನ್ನು ಇಲ್ಲಿ ಅನುಭವಿಸಬಹುದಾಗಿದೆ. ಅಷ್ಟೆ ಅಲ್ಲದೇ, ಬಾಲಿವುಡ್ ಪೋಸ್ಟರ್‌ಗಳು, ಲಾಬಿ ಕಾರ್ಡ್‌ಗಳು ಸಹ ನೋಡಸಿಗಲಿವೆ. ಈ ಕಿರುಚಿತ್ರಗಳ ಸರಣಿಯು ಆಯ್ದ ಕಲಾವಿದರ ಜೀವನ ಮತ್ತು ಅಭ್ಯಾಸಗಳ ಬಗ್ಗೆ ನಿಕಟ ಒಳನೋಟಗಳನ್ನು ನೀಡುತ್ತದೆ.
ಎಸ್.ಹೆಚ್. ರಾಝಾ ಅವರ "ಯುನಿವರ್ಸ್", ಜಾಮಿನಿ ರಾಯ್ ಅವರ "ಲಾಸ್ಟ್ ಸಪ್ಪರ್", ಎನ್.ಎಸ್. ಬೇಂದ್ರೆ ಅವರ "ದ ಲೋಟಸ್ ಸೆಲ್ಲರ್ಸ್" ಮುಂತಾದ ಅತ್ಯಂತ ಪ್ರಸಿದ್ಧ ಕಲಾಕೃತಿಗಳನ್ನು ಸ್ಪರ್ಶಾಧಾರಿತವಾಗಿ ಅನುಭವಿಸಬಹುದಾಗಿದೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ಕಲಾತ್ಮಕ ಅನುಭವವನ್ನುನೀಡುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಆಧುನಿಕ ಹೆಬ್ಬಾಗಿಲಾಗಿ ತನ್ನ ಪಾತ್ರವನ್ನು ಮರು ವ್ಯಾಖ್ಯಾನಿಸುತ್ತಿದೆ. ಪ್ರಯಾಣಿಕರು ಕೇವಲ ತಡೆರಹಿತ ಸಂಪರ್ಕವಷ್ಟೇ ಅಲ್ಲದೇ, ಸೃಜನಶೀಲತೆ, ಕುತೂಹಲ ತಣಿಸುವ ಕಲೆಯ ಅನುಭವವನ್ನು ವಿಮಾನ ನಿಲ್ದಾಣದಲ್ಲಿ ಪಡೆಯಬಹುದಾಗಿದೆ.