image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಿಮ್ಸ್​ನಲ್ಲಿ‌ ಸಾವು ಆರೋಪ : ಸತ್ಯಾಸತ್ಯತೆ ಪರಿಶೀಲನೆಗೆ ತಜ್ಞರ ಸಮಿತಿ

ಮಿಮ್ಸ್​ನಲ್ಲಿ‌ ಸಾವು ಆರೋಪ : ಸತ್ಯಾಸತ್ಯತೆ ಪರಿಶೀಲನೆಗೆ ತಜ್ಞರ ಸಮಿತಿ

ಮಂಡ್ಯ : ಮಳವಳ್ಳಿ ತಾಲೂಕು ನೆಲ್ಲೂರು ಗ್ರಾಮದ ಬಾಲಕಿ ಸಾನ್ವಿ (7) ವೈದ್ಯರ ನಿರ್ಲಕ್ಷ್ಯದಿಂದ ಮಿಮ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾದ್ದಳು ಎಂಬ ಆರೋಪ ಕೇಳಿಬಂದಿದೆ. ಬಾಲಕಿಯ ಸಾವಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡದೆ ವೈದ್ಯರ ನಿರ್ಲಕ್ಷಿಸಿದ್ದಾರೆ ಎಂಬ ಗುರುತರವಾದ ಆರೋಪ ಬಂದಿರುವುದರಿಂದಾಗಿ ಸದರಿ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಿದೆ.

ಸಮಿತಿಯಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರದೀಪ್ ಅವರು ಅಧ್ಯಕ್ಷರಾಗಿ, ನಾಗಮಂಗಲ ತಾಲೂಕಿನ ಬಿ. ಜಿ. ನಗರದಲ್ಲಿರುವ ಮೂಳೆ ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಹೇಶ್, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬಾಲಕೃಷ್ಣ, ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಚೇತನನಂದ ಅವರು ಸದಸ್ಯರಾಗಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ‌ ಕಚೇರಿಯ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್ ಅವರು ಸದಸ್ಯ ಕಾರ್ಯದರ್ಶಿಯಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಸಮಿತಿಯು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೂಡಲೇ ತನಿಖೆ ನಡೆಸಿ, ತನಿಖಾ ವರದಿಯನ್ನು 15 ದಿನದೊಳಗಾಗಿ ತಪ್ಪದೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸೂಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಹಾಗೂ ಶಾಸಕ ಗಣಿಗ ರವಿಕುಮಾರ್ ಅವರು ಮಿಮ್ಸ್​ನಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಬಾಲಕಿ ಸಾವಿನ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.

ಶಾಸಕ ಗಣಿಗ ರವಿಕುಮಾರ್ ಅವರು ಮಾತನಾಡಿ, 'ಬಾಲಕಿ ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ವೈದ್ಯರು ಹೇಳೋದೇ ಬೇರೆ, ಪೋಷಕರು ಹೇಳೋದು ಬೇರೆ. ಮೈಸೂರು ಕೆಆರ್ ಆಸ್ಪತ್ರೆಯ ವೈದ್ಯರ ತಂಡ ತನಿಖೆ ನಡೆಸಲಿದೆ. ವೈದ್ಯರ ತಪ್ಪಿಲ್ಲವೆಂದು ಮಿಮ್ಸ್ ಅಧಿಕಾರಿಗಳು ಸಭೆಗೆ ಮಾಹಿತಿ ಕೊಟ್ಟಿದ್ದಾರೆ. ಅವರ ಮಾಹಿತಿ ನನಗೆ ತೃಪ್ತಿ ತಂದಿಲ್ಲ. ಹೀಗಾಗಿ, ಮೈಸೂರು ಮೆಡಿಕಲ್ ಕಾಲೇಜು ವೈದ್ಯರ ತಂಡ ತನಿಖೆ ನಡೆಸಿ ವರದಿ ನೀಡಲಿದೆ' ಎಂದಿದ್ದಾರೆ.

'15 ದಿನಗಳಲ್ಲಿ ತನಿಖಾ ತಂಡ ವರದಿ ನೀಡಲಿದೆ. ಮೂಳೆ ಮುರಿದು ಚಿಕಿತ್ಸೆಗೆ ಬಂದಿದ್ದ ಮಗು ಸಾವು ಹೇಗಾಯ್ತು ಎಂಬುದರ ಬಗ್ಗೆ ಪ್ರಶ್ನೆ ಇದೆ. ಮಗು ಚಿಕಿತ್ಸೆಗೆ ದಾಖಲಾಗುವ ಮುನ್ನ ಅಂಗಾಂಗ ವೈಫಲ್ಯ ಆಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಮಗು ಸಾವಿನ ಸತ್ಯಾಸತ್ಯತೆ ಅರಿಯಬೇಕಿದೆ. ವೈದ್ಯರ ನಿರ್ಲಕ್ಷ್ಯವೋ ಅಥವಾ ನಿಜವಾದ ಆರೋಗ್ಯ ಸಮಸ್ಯೆಯೋ ತಿಳಿಯಬೇಕು. ಹಾಗಾಗಿ ಮೈಸೂರು ವೈದ್ಯರ ತಂಡ ತನಿಖೆ ನಡೆಸಲಿದೆ' ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ