ದೇವನಹಳ್ಳಿ : ದೇಶದಲ್ಲಿ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೋಮವಾರ ಲೋಕಾರ್ಪಣೆಗೊಂಡಿತು.
ದೇವನಹಳ್ಳಿಯ ಬೇಗೂರು ಕ್ರಾಸ್ ಬಳಿ ದೇಶದ ಮೊದಲ ಸೌರಶಕ್ತಿ ಇವಿ ಜಾರ್ಜಿಂಗ್ ಕೇಂದ್ರವನ್ನ ಇಂಧನ ಸಚಿವ ಕೆ. ಜೆ. ಜಾರ್ಜ್ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ಬೆಸ್ಕಾಂ ಹಾಗೂ ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿ.ಐ.ಝಡ್) ಸಹಭಾಗಿತ್ವದಲ್ಲಿ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲೈಫ್ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಅನಾವರಣ ಮಾಡಲಾಗಿದೆ.
ಇವಿ ಚಾರ್ಜಿಂಗ್ ಹಬ್‌ನಲ್ಲಿ ಏಕಕಾಲದಲ್ಲಿ 23 ಇಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದಾಗಿದ್ದು, ಒಂದೇ ಬಾರಿಗೆ 18 ಇವಿ ಕಾರುಗಳ ಚಾರ್ಜಿಂಗ್ ಮಾಡೋ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲೇ ಪ್ರಥಮ ಬಾರಿಗೆ ಸೋಲಾರ್ ಪ್ಯಾನಲ್ಗಳನ್ನು ಬಳಸಿ, ಎಲೆಕ್ಟ್ರಿಕ್ ಕನ್ವರ್ಟ್ ಮೂಲಕ ಇವಿ ಚಾರ್ಜಿಂಗ್ ಮಾಡೋ ಹಬ್ ಇದಾಗಿದೆ. ಪ್ರತಿ ಯೂನಿಟ್ಗೆ 7 ರೂ. ದರ ನಿಗದಿ ಮಾಡಲಾಗಿದೆ. ಇದು ತಾಂತ್ರಿಕ ಪ್ರಗತಿಯೊಂದಿಗೆ ಸುಸ್ಥಿರ ಇಂಧನ ಮತ್ತು ಇ-ಮೊಬಿಲಿಟಿಯನ್ನು ಪ್ರೋತ್ಸಾಹಿಸಲು ಬದ್ಧವಾಗಿರುವ ಉಪಕ್ರಮವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು ಮಾತನಾಡಿ, ದೇಶದಲ್ಲೇ ಇವಿ ಮೂಲಸೌಕರ್ಯ ಕಲ್ಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ರಾಜ್ಯಾದ್ಯಂತ ಒಟ್ಟು 5,880 ಚಾರ್ಜಿಂಗ್ ಕೇಂದ್ರಗಳು, ಅದರಲ್ಲೂ ಬೆಂಗಳೂರು ನಗರದಲ್ಲೇ 4,462 ಇವಿ ಚಾರ್ಜಿಂಗ್ ಕೇಂದ್ರಗಳಿವೆ. ನಮ್ಮ ರಾಜ್ಯದಲ್ಲಿ ಶೇ. 65 ರಷ್ಟು ನವೀಕರಿಸಬಹುದಾದ ಇಂಧನ ಬಳಸಿ ಕರೆಂಟ್ ಉತ್ಪಾದಿಸುತ್ತಿದ್ದೇವೆ ಎಂದು ಹೇಳಿದರು.
ವಿಮಾನ ನಿಲ್ದಾಣ ಸಮೀಪದಲ್ಲೇ ಇವಿ ಚಾರ್ಜಿಂಗ್ ಹಬ್ ನಿರ್ಮಾಣವಾಗಿರುವುದರಿಂದ, ಕ್ಯಾಬ್ ಚಾಲಕರು, ಇವಿ ಬಳಸುತ್ತಿರುವ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ.