ಮೈಸೂರು: ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ಸತತವಾಗಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕನಿಷ್ಠ ಸೌಲಭ್ಯವನ್ನೂ ನೀಡದೇ ವಂಚಿಸುತ್ತಿದೆ. ಹೀಗಾಗಿ ಜೂನ್ 13ರಿಂದ ಅತಿಥಿ ಶಿಕ್ಷಕರು ಶಾಲೆ ತೊರೆದು ಪ್ರತಿಭಟಿಸಲಿದ್ದಾರೆ ಎಂದು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಖಜಾಂಚಿ ಹೆಚ್.ಎಸ್.ಸೌಮ್ಯ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಶಾಲಾ ಶಿಕ್ಷಣ ಮತ್ತು ಪ್ರಾಥಮಿಕ ಸಾಕ್ಷರತಾ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಇವರು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಸಾಕಷ್ಟು ಹೋರಾಟ ನಡೆಸಿ, ರಾಜ್ಯ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ. ಆದರೂ ಪ್ರಮುಖ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿಲ್ಲ. ಯಾರೂ ಸಹ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಸೇವಾ ಪ್ರಮಾಣಪತ್ರ ಹಾಗೂ ಸೇವಾ ಭದ್ರತೆ ನೀಡುವುದು. ಗೌರವಧನ ಕನಿಷ್ಠ 25 ಸಾವಿರ ರೂ.ಗೆ ಹೆಚ್ಚಿಸುವುದು. ವಾರ್ಷಿಕ ಶೇ.5ರಷ್ಟು ಕೃಪಾಂಕ ನೀಡುವುದು.ಸೇವೆ ಖಾಯಂಗೊಳಿಸುವುದು ನಮ್ಮ ಬೇಡಿಕೆ ಎಂದರು.
"ಹೀಗಾಗಿ, ಈಗ ಅನಿವಾರ್ಯವಾಗಿ ಹೋರಾಟ ನಡೆಸುತ್ತಿದ್ದು, ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣಪತ್ರ ಹಾಗೂ ಸೇವಾ ಭದ್ರತೆ ನೀಡಬೇಕು. ಪ್ರಸ್ತುತ ನೀಡುತ್ತಿರುವ 12 ಸಾವಿರ ರೂ. ಗೌರವಧನವನ್ನು ಕನಿಷ್ಠ 25 ಸಾವಿರ ರೂ.ಗೆ ಹೆಚ್ಚಿಸಬೇಕು. ಸೇವೆ ಪರಿಗಣಿಸಿ ವಾರ್ಷಿಕ ಶೇ.5ರಷ್ಟು ಕೃಪಾಂಕ ನೀಡಬೇಕು. ಸೇವೆ ಖಾಯಂಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕು" ಎಂಬುದು ಸಂಘದ ಬೇಡಿಕೆಗಳಾಗಿವೆ ಹೆಚ್.ಎಸ್.ಸೌಮ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಹೇಶ್ ಕುಮಾರ್, ಪ್ರದೀಪ್ ಕುಮಾರ್ ಹಾಗೂ ಶಶಿ ಕುಮಾರ್ ಸೇರಿ ಇತರರು ಉಪಸ್ಥಿತರಿದ್ದರು.