ರಾಯಚೂರು : ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಕರೆಗೆ 20 ಕ್ವಿಂಟಾಲ್‌ನಂತೆ ರೈತರಿಂದ ಜೋಳ ಖರೀದಿಸುವಂತೆ ಒತ್ತಾಯಿಸಿ ಸಿಂಧನೂರಿನಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಸಿಂಧನೂರು ನಗರದ ತಹಶೀಲ್ದಾರ್ ಕಚೇರಿ ಎದುರು ನೂರಾರು ರೈತರು ಪ್ರತಿಭಟನೆ ನಡೆಸಿದರು. 2024-25ನೇ ಸಾಲಿನಲ್ಲಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ರೈತರ ಸಂಪೂರ್ಣ ಜೋಳವನ್ನು ಖರೀದಿಸಬೇಕು. ಈಗಾಗಲೇ ಮಳೆಗಾಲ ಶುರುವಾಗಿದ್ದು, ಸಂಗ್ರಹಿಸಿರುವ ಜೋಳಕ್ಕೆ ಮೊಳಕೆ ಒಡೆಯುವ, ಹುಳು ಹತ್ತುವ ಸಾಧ್ಯತೆಯಿದೆ. ಇದರಿಂದಾಗಿ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ರೈತರು ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಕಾಂಗ್ರೆಸ್ ಮುಖಂಡ ಪಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ರೈತರ ಪ್ರತಿಭಟನಾ ಸ್ಥಳಕ್ಕೆ ತೆರಳಿ ಹೋರಾಟಕ್ಕೆ ಬೆಂಬಲಿಸಿದರು.
ಈ ವೇಳೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, 'ರೈತರ ಜೋಳ ಖರೀದಿ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ, ರೈತರನ್ನು ಸರ್ಕಾರ ಅಲಕ್ಷ್ಯ ಮಾಡುವುದು ಸರಿಯಲ್ಲ. ನೊಂದಣಿ ಮತ್ತು ಖರೀದಿಗೂ ರೈತರು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಠಿಯಾಗಿದೆ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರ ಹೋರಾಟಕ್ಕೆ ನಾವು ಸದಾ ಬೆಂಬಲ ಸೂಚಿಸುತ್ತೇವೆ' ಎಂದು ಹೇಳಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, 'ಸರ್ಕಾರದಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನ ಜೆಡಿಎಸ್ ಸಹಿಸುವುದಿಲ್ಲ. ಅಧಿಕಾರಿಗಳಿಗೆ ಒಕ್ಕಲುತನ ಗೊತ್ತಿಲ್ಲ. ಅದಕ್ಕೆ ಇಲ್ಲಸಲ್ಲದ ನಿಯಮಗಳನ್ನು ಹೇರಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಸರ್ಕಾರ ಶೀಘ್ರಗತಿಯಲ್ಲಿ ರೈತರ ನೆರವಿಗೆ ಧಾವಿಸಬೇಕು' ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಪಂಪನಗೌಡ ಬಾದರ್ಲಿ ಮಾತನಾಡಿ, 'ರೈತರು ಯಾವುದೇ ಕಾರಣಕ್ಕೆ ಎದೆಗುಂದಬಾರದು. ಶಾಸಕ ಹಂಪನಗೌಡ ಬಾದರ್ಲಿ ಈ ಬಗ್ಗೆ ಈಗಾಗಲೇ ಕೃಷಿ ಸಚಿವರಿಗೆ ಭೇಟಿಯಾಗಿ ಮನವರಿಕೆ ಮಾಡಿದ್ದಾರೆ. ಅವರಿಂದಲೂ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದ್ದು, ಇನ್ನೂ ಎರಡು ದಿನದೊಳಗೆ ಸರ್ಕಾರದಿಂದ ಆದೇಶ ಮಾಡಿಸುವ ಭರವಸೆ ನೀಡಿದ್ದಾರೆ' ಎಂದು ರೈತರಿಗೆ ಭರವಸೆ ನೀಡಿದರು.