image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ನೂರಾರು ಮನೆಗಳು ಜಲಾವೃತ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ನೂರಾರು ಮನೆಗಳು ಜಲಾವೃತ

ದಕ್ಷಿಣ ಕನ್ನಡ : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ನೂರಾರು ಮನೆಗಳು, ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಮುಂಜಾನೆಯ ಬಳಿಕ ಮಳೆಯ ಅಬ್ಬರ ಕಡಿಮೆಯಾಗಿದೆ. ಜೆಪ್ಪಿನಮೊಗರು ಸೇರಿದಂತೆ ಹಲವೆಡೆ ಕೃತಕ ನೆರೆಯಿಂದ ಮನೆಗಳು ಜಲಾವೃತವಾಗಿದ್ದು, ಸಾಮಗ್ರಿಗೆ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಾದ ಪಡೀಲ್​ನ ರಸ್ತೆಯಲ್ಲಿ ನೀರು ತುಂಬಿ ವಾಹನಗಳ ಓಡಾಟಕ್ಕೆ ಅಡಚಣೆಯುಂಟಾದರೆ, ಪಡೀಲ್ ಬಜಾಲ್‌ನ ರೈಲ್ವೆ ಅಂಡರ್ ಪಾಸ್​ನಲ್ಲಿ ನೀರು ತುಂಬಿ ವಾಹನಗಳು, ಜನರ ಓಡಾಟಕ್ಕೆ ತೊಂದರೆಯಾಗಿದೆ. ಜೋಕಟ್ಟೆ, ಹಂಪನಕಟ್ಟೆಯಲ್ಲಿ ಗುಡ್ಡ ಜರಿದು ಸಮಸ್ಯೆಯಾಗಿದ್ದರೆ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿಯೂ ಹಲವೆಡೆ ಕೃತಕ ನೆರೆಯಿಂದ ಮನೆಗಳು ಜಲಾವೃತವಾಗಿವೆ.

ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿ ಗುಡ್ಡ ಕುಸಿದು ಮಗು ಸಾವನ್ನಪ್ಪಿದರೆ, ಮಂಜನಾಡಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ತೋಟಬೆಂಗ್ರೆ ಅಳಿವೆ ಬಾಗಿಲಿನಲ್ಲಿ ನಾಡದೋಣಿ ಮಗುಚಿ ಇಬ್ಬರು ನೀರುಪಾಲಾದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಯಶವಂತ, ಕಮಲಾಕ್ಷ ಎಂಬವರು ನಾಪತ್ತೆಯಾಗಿದ್ದು, ನಾಡದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ಸಮೀಪ ದಡದಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಇಂದು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಸಂಜೆ ವೇಳೆಗೆ ಮಂಗಳೂರು ತಲುಪಲಿರುವ ಸಚಿವರು, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.‌

ಭಾರಿ ಮಳೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದ್ದಾರೆ. ಇಂದು ಮಂಗಳೂರಿನಲ್ಲಿಯೇ ತಂಗಲಿರುವ ಅವರು, ತ್ವರಿತಗತಿಯಲ್ಲಿ ವಿಪತ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಸ್ಥಳದಲ್ಲೇ ಇದ್ದು, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Category
ಕರಾವಳಿ ತರಂಗಿಣಿ