ಉತ್ತರ ಕನ್ನಡ : ಜಿಲ್ಲೆಯಲ್ಲಿ ಈ ಬಾರಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾನ್ಸೂನ್ ಆರಂಭಕ್ಕೂ ಪೂರ್ವದಲ್ಲೇ ಅಬ್ಬರಿಸುವ ಮಳೆ ಮುಂದುವರಿದಿದ್ದು, ಕಳೆದೊಂದು ವಾರದ ಅವಧಿಯಲ್ಲಿ 221 ಮಿ.ಮೀ ಮಳೆಯಾಗಿದೆ. ಇಷ್ಟಾದರೂ ಕಳೆದ ಬಾರಿ ಗುಡ್ಡಕುಸಿತ ಸಂಭವಿಸಿದ ಅಂಕೋಲಾದ ಶಿರೂರಿನ ಗುಡ್ಡ ಕುಸಿದ ಪ್ರದೇಶದಲ್ಲಿ ಯಾವುದೇ ಪರಿಹಾರ ಕ್ರಮವಾಗದೇ ಇರುವುದು ಈ ಭಾಗದಲ್ಲಿ ಸಂಚರಿಸುವವರ ಆತಂಕ ಹೆಚ್ಚಿಸಿದೆ.
"ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಸುರಿದ ಮಳೆ ದೊಡ್ಡ ಅನಾಹುತ ಸೃಷ್ಟಿಸಿತ್ತು. ಅದರಲ್ಲಿಯೂ ಶಿರೂರಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ 11 ಮಂದಿ ಕಣ್ಮರೆಯಾಗಿದ್ದರು. ಇಂದಿಗೂ ಕೂಡ ಇಬ್ಬರ ಮೃತದೇಹ ಸಿಕ್ಕಿಲ್ಲ. ಅಲ್ಲದೆ ಜಿಲ್ಲೆಯ ವಿವಿಧೆಡೆ ಸಾಲು ಸಾಲು ಗುಡ್ಡ ಕುಸಿತಗಳು ಸಂಭವಿಸಿ ಪ್ರಮುಖ ಹೆದ್ದಾರಿಗಳು ಬಂದ್ ಆಗಿ ಜನರು ತಿಂಗಳುಗಟ್ಟಲೆ ಪರದಾಡಬೇಕಾಯಿತು" ಎಂದು ಸ್ಥಳೀಯರಾದ ದೀಪಕ್ ಶೆಣೈ ಹೇಳಿದರು. "ಇಷ್ಟೊಂದು ಭೀಕರ ಪರಿಸ್ಥಿತಿ ಇದ್ದರೂ ಗುಡ್ಡಕುಸಿತ ತಡೆಗೆ ಯಾವುದೇ ಪರಿಹಾರ ಕ್ರಮಗಳಾಗಿಲ್ಲ. ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿ ಈಗಲೂ ಗುಡ್ಡ ಬಾಯ್ತೆರೆದುಕೊಂಡಿದೆ. ಗಂಗಾವಳಿಯಲ್ಲಿ ಬಿದ್ದಿರುವ ರಾಶಿ ರಾಶಿ ಮಣ್ಣು ಹಾಗೆಯೇ ಉಳಿದಿದ್ದು, ತೆರವು ಮಾಡಬೇಕೆಂಬ ಬೇಡಿಕೆ ಇನ್ನೂ ಕೂಡ ಟೆಂಡರ್ ಹಂತದಲ್ಲೇ ಇದೆ" ಎಂದು ಅವರು ತಿಳಿಸಿದರು.
"ಇದೀಗ ಎಡಬಿಡದೆ ಮಳೆಯಾಗುತ್ತಿರುವುದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಳೆ ಹೀಗೆಯೇ ಮುಂದುವರಿದಲ್ಲಿ ಈ ಭಾಗದ ಜನ ಪ್ರವಾಹಕ್ಕೆ ಸಿಲುಕುವ ಭೀತಿಯಿದೆ. ಅರ್ಧ ಗುಡ್ಡ ಕುಸಿದ ಹೆದ್ದಾರಿಯಲ್ಲಿಯೂ ಮತ್ತೆ ಅರ್ಧ ಗುಡ್ಡ ಕುಸಿಯುವ ಭೀತಿ ಎದುರಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು. "ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡ ಉಳುವರೆಯ ಗ್ರಾಮದವರಿಗೆ ನಿವೇಶನದ ಭರವಸೆ ನೀಡಿದ್ದರೂ ಕೇವಲ ಜಾಗ ಗುರುತಿಸುವ ಕೆಲಸ ಮಾತ್ರ ಆಗಿದೆ. ಅವರಿಗೆ ಮನೆ ಕಟ್ಟಿಕೊಡುವ ಕೆಲಸವಾಗಿಲ್ಲ. ಘಟನೆ ನಡೆದು ಇನ್ನೊಂದು ತಿಂಗಳು ಕಳೆದರೆ ವರ್ಷ ತುಂಬುತ್ತದೆ. ಸ್ಥಳಕ್ಕೆ ಸ್ವತಃ ಮುಖ್ಯಮಂತ್ರಿಯೇ ಭೇಟಿ ನೀಡಿ ಪರಿಶೀಲಿಸಿದರೂ ಈ ಪ್ರದೇಶದಲ್ಲಿ ಯಾವುದೇ ಕ್ರಮವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ತಡೆಗೆ 200 ಕೋಟಿ ರೂ ಘೋಷಣೆ ಮಾಡಿದ್ದರೂ ಈವರೆಗೂ ಆ ಹಣ ಬಳಕೆಯಾಗಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ 600ಕ್ಕೂ ಹೆಚ್ಚು ಕಡೆ ಭೂ ಕುಸಿತ ಸಂಭವಿಸಿದೆ. ಅಲ್ಲದೆ, ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಯಾಣ ಸಮೀಪದಲ್ಲಿ ಭೂ ಕಂಪನ ಸಂಭವಿಸಿದ ಪರಿಣಾಮ ಜಿಲ್ಲೆಯ ವಿವಿಧೆಡೆ ಇದರ ಅನುಭವವಾಗಿ ಜನ ಆತಂಕಕ್ಕೊಳಗಾಗಿದ್ದರು. ಇಷ್ಟಾದರೂ ಗುಡ್ಡ ಕುಸಿತದ ಪ್ರದೇಶಗಳಲ್ಲಿ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಮಾತ್ರವಲ್ಲ, ರಾಜ್ಯದಲ್ಲಿಯೇ ಭೀಕರ ದುರಂತಕ್ಕೆ ಕಾರಣವಾಗಿದ್ದ ಅಂಕೋಲಾದ ಶಿರೂರಿನಲ್ಲಿಯೂ ಮತ್ತೆ ಗುಡ್ಡ ಕುಸಿತ ತಡೆಗೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.