ಬೆಂಗಳೂರು: ಸೇನಾ ಕ್ಯಾಂಟೀನ್‌ಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಕೆಪಿಸಿಸಿಯ ಮಾಜಿ ಸೈನಿಕ ವಿಭಾಗದ ವತಿಯಿಂದ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಆಯೋಜಿಸಿದ್ದ ಬೃಹತ್ "ಜೈ ಹಿಂದ್ ಸಭಾ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಿವೃತ್ತ ಯೋಧರ ಸಮೂಹವನ್ನು ಸನ್ಮಾನಿಸಿ, ಹುತಾತ್ಮ ಸೈನಿಕರ ಕುಟುಂಬದ ಸದಸ್ಯರನ್ನು ಸನ್ಮಾನಿಸಿ, ಮಾತನಾಡಿದರು.
"ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ ತಾಯಿಯರಷ್ಟೇ ಸ್ಮರಣೀಯರು. ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ, 140 ಕೋಟಿ ಭಾರತೀಯರ ಜವಾಬ್ದಾರಿ. ಶಿಷ್ಟರ ರಕ್ಷಣೆ, ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ತನ್ನ ಇತಿಹಾಸದಲ್ಲೇ ಯಾವತ್ತೂ ರಾಜಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ" ಎಂದು ಸಿದ್ಧರಾಮಯ್ಯ ಶ್ಲಾಘಿಸಿದರು.
ಸೇನಾ ಕ್ಯಾಂಟೀನ್‌ಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಘೋಷಿಸುವ ಮೂಲಕ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣಕ್ಕಾಗಿ ಅಬಕಾರಿ ಇಲಾಖೆ ಸೇನಾ ಕ್ಯಾಂಟೀನ್‌ಗಳಿಗೆ ಸರಬರಾಜಾಗುವ ಮದ್ಯದ ಮೇಲಿನ ಹೆಚ್ಚುವರಿ ತೆರಿಗೆ ಹೆಚ್ಚಿಸಲಿದೆ ಎಂಬ ಗೊಂದಲಕ್ಕೆ ಮುಖ್ಯಮಂತ್ರಿಗಳು ತೆರೆ ಎಳೆದರು. ಅಲ್ಲದೇ, ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅವರು ತಿಳಿಸಿದರು.