image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸುಗ್ರೀವಾಜ್ಞೆ ಸೇರಿದಂತೆ ರಾಜ್ಯಪಾಲರಿಂದ ಮೂರು ಸುಗ್ರೀವಾಜ್ಞೆಗಳಿಗೆ ಅಂಕಿತ

ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸುಗ್ರೀವಾಜ್ಞೆ ಸೇರಿದಂತೆ ರಾಜ್ಯಪಾಲರಿಂದ ಮೂರು ಸುಗ್ರೀವಾಜ್ಞೆಗಳಿಗೆ ಅಂಕಿತ

ಬೆಂಗಳೂರು: ಗಿಗ್ ಕಾರ್ಮಿಕರ ಸಾಮಾಜಿಕ‌ ಭದ್ರತೆ ಕಲ್ಪಿಸುವ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಅಧ್ಯಾದೇಶ, 2025ಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ.

ಈ ಸುಗ್ರೀವಾಜ್ಞೆಯಿಂದ ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊಗಳಲ್ಲಿ ಫುಡ್‌ ಡೆಲವರಿ ಮಾಡುವ, ರೈಡ್‌ ಶೇರಿಂಗ್‌ ಸೇವೆಗಳಾದ ಓಲಾ, ಉಬರ್‌, ರ್‍ಯಾಪಿಡೋ ಯಾತ್ರಿ ಇತ್ಯಾದಿ ಅಪ್ಲಿಕೇಷನ್ ಆಧಾರಿತ ಚಾಲಕರು, ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಪ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಮತ್ತಿತ್ತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ರಾಜ್ಯ ಸರ್ಕಾರ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚಿಸಬೇಕು. ಈ ಮಂಡಳಿಗೆ ಕಾರ್ಮಿಕ ಸಚಿವರು ಅಧ್ಯಕ್ಷರಾಗಿರಲಿದ್ದಾರೆ. ಮಂಡಳಿಯಲ್ಲಿ ಅಧ್ಯಕ್ಷರು ಸೇರಿ 9 ಮಂದಿ ಸದಸ್ಯರಿರಲಿದ್ದಾರೆ. ಸಂಗ್ರಹಕಾರರು ಅಥವಾ ವೇದಿಕೆಗಳು ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥವಾ ನೋಂದಾಯಿಸಿದ ಎಲ್ಲಾ ಗಿಗ್ ಕಾರ್ಮಿಕರ ದತ್ತಾಂಶವನ್ನು ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ನಲವತ್ತೈದು ದಿನಗಳೊಳಗಾಗಿ ನಿಯಮಿಸಬಹುದಾದಂಥ ವಿಧಾನದಲ್ಲಿ ಮಂಡಳಿಗೆ ಒದಗಿಸಬೇಕು. ಯಾವುದೇ ವೇದಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಥವಾ ನೋಂದಾಯಿಸಿದ ಎಲ್ಲಾ ವೇದಿಕೆ ಆಧಾರಿತ ಗಿಗ್ ಕಾರ್ಮಿಕರು ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ವಿದ್ಯುನ್ಮಾನದ ಮೂಲಕ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಸರ್ಕಾರವು, ನೋಂದಾಯಿಸಿದ ವೇದಿಕೆ ಆಧಾರಿತ ಗಿಗ್ ಕಾರ್ಮಿಕರಿಗಾಗಿ ಕರ್ನಾಟಕ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಸಂಗ್ರಹಕಾರರು ಅಥವಾ ವೇದಿಕೆಗಳಿಂದ "ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಶುಲ್ಕ" ವೆಂದು ಕರೆಯುವ ಕ್ಷೇಮಾಭಿವೃದ್ಧಿ ಶುಲ್ಕವನ್ನು ವಿಧಿಸಬೇಕು. ಅಧ್ಯಾದೇಶವು ಜಾರಿಗೆ ಬಂದ ಆರು ತಿಂಗಳೊಳಗಾಗಿ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಪ್ರತಿಯೊಂದು ವಹಿವಾಟಿನಲ್ಲಿ ಪಾವತಿ ನೀಡಿಕೆಯ ಶೇಕಡಾ ಒಂದರಷ್ಟಕ್ಕೆ ಕಡಿಮೆಯಲ್ಲದ, ಆದರೆ, ಶೇಕಡಾ ಐದರಷ್ಟನ್ನು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುವುದು. ಗಿಗ್‌ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದರೆ ಅಪಘಾತ ಪರಿಹಾರ ಮತ್ತು ಜೀವ ವಿಮೆ ಸೇರಿ ₹4 ಲಕ್ಷ ಮತ್ತು ₹2 ಲಕ್ಷ ಮೊತ್ತದ ಜೀವ ವಿಮೆ ಒದಗಿಸಲಾಗುವುದು.‌

ಗ್ರಾಮೀಣ ಸೇವೆ ಸಡಿಲಗೊಳಿಸುವ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧ್ಯಾದೇಶ, 2025ಕ್ಕೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

Category
ಕರಾವಳಿ ತರಂಗಿಣಿ