image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಉತ್ತಮ ಮಳೆ, ರೈತರಿಂದ ಕೃಷಿ ಚಟುವಟಿಕೆಗಳಿಗೆ ಚುರುಕು

ಉತ್ತಮ ಮಳೆ, ರೈತರಿಂದ ಕೃಷಿ ಚಟುವಟಿಕೆಗಳಿಗೆ ಚುರುಕು

ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿದ್ದಾರೆ. ಮಾಗಿ ಹುಣ್ಣಿಮೆಯ ನಂತರ ರೈತರು ಕೊಟ್ಟಿಗೆ ಗೊಬ್ಬರ ಬೆರೆಸಿ ಭೂಮಿಯನ್ನು ಬಿತ್ತನೆಗೆ ಹದಗೊಳಿಸುತ್ತಿದ್ದರು. ಈಗ ಬಿದ್ದಿರುವ ಮಳೆಯಿಂದಾಗಿ ತೊಗರಿ, ಹತ್ತಿ, ಸಜ್ಜೆ, ನವಣೆ ಮತ್ತು ಸೂರ್ಯಕಾಂತಿ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

"ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಲು ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ ಬೀಜ ದಾಸ್ತಾನಿದೆ. ನೀರಾವರಿ ಭೂಮಿಯಲ್ಲಿ ಬಿತ್ತನೆಗೆ ಆರ್.ಎನ್.ಆರ್ ಮತ್ತು ಸೋನಾಮಸೂರಿ ತಳಿಯ ಭತ್ತದ ಬೀಜ ಸಂಗ್ರಹವಿದೆ. ಬಹುತೇಕ ಕೃಷಿ ಪರಿಕರಗಳ ಮಾರಾಟಗಾರರು ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದಾರೆ. ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಲು ಸಜ್ಜಾಗಿರುವುದರಿಂದಾಗಿ ಈ ವರ್ಷ ರೈತರಿಗೆ ಕೊರತೆಯಾಗುವುದಿಲ್ಲ" ಎಂದರು ಜಂಟಿ ಕೃಷಿ ನಿರ್ದೇಶಕ ಟಿ.ಸೋಮಸುಂದರ್ ಹೇಳಿದ್ದಾರೆ.

"ಕೃಷಿ ಇಲಾಖೆ ಜಿಲ್ಲೆಯ 13 ರೈತ ಸಂಪರ್ಕ ಕೇಂದ್ರ ಮತ್ತು 02 ಹೆಚ್ಚುವರಿ ಕೇಂದ್ರ ಸೇರಿ ಒಟ್ಟು 15 ಕೇಂದ್ರಗಳ ಮೂಲಕ ವಿವಿಧ ಬೆಳೆಯ ಬಿತ್ತನೆ ಬೀಜಗಳನ್ನು ಸಹಾಯಧನದಡಿ ವಿತರಿಸಲು ವ್ಯವಸ್ಥೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಪಕವಾಗಿದ್ದು, ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಅಭಾವದ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುಂಗಾರು ಹಂಗಾಮಿಗೆ ಒಟ್ಟು 1,08,100 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಪ್ರಸ್ತುತ 40,228 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಹಂತ ಹಂತವಾಗಿ ಬೇಡಿಕೆ ಅನುಗುಣವಾಗಿ ಉಳಿದ ರಸಗೊಬ್ಬರ ಕಾಲಕಾಲಕ್ಕೆ ಸರಬರಾಜು ಆಗಲಿದೆ. ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 11,766 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 11,800 ಕ್ವಿಂಟಾಲ್ ಲಭ್ಯವಿದೆ" ಎಂದು ಹೇಳಿದರು.

Category
ಕರಾವಳಿ ತರಂಗಿಣಿ