ಬೆಂಗಳೂರು : "ಸೆಪ್ಟೆಂಬರ್ 15ರ ಒಳಗಾಗಿ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು,"ವಿರೋಧ ಪಕ್ಷದ ನಾಯಕರು ಸೇರಿದಂತೆ ಇನ್ನೂ ಮೂರ್ನಾಲ್ಕು ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಎಲ್ಲರ ಸಲಹೆ ಪಡೆದ ಬಳಿಕ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು" ಎಂದರು.
"ಮೇ 15ರಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಜಿಎ) ಆಗಿ ಪರಿವರ್ತನೆಗೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. 120 ದಿನಗಳಲ್ಲಿ ನಾವು ಪಾಲಿಕೆಗಳನ್ನು ರಚನೆ ಮಾಡಲೇಬೇಕು. ಹೀಗಾಗಿ ಎಷ್ಟು ಪಾಲಿಕೆ ಮಾಡಬೇಕು ಎಂದು ಬೆಂಗಳೂರಿನ ಎಲ್ಲಾ ಶಾಸಕರ ಬಳಿ ಸಲಹೆಗಳನ್ನು ಕೇಳಿದ್ದೇನೆ. ನಂತರ ಮುಂದೆ ಎಲ್ಲೆಲ್ಲಿ ವಿಸ್ತರಣೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಸೆಪ್ಟೆಂಬರ್ 15ರ ಒಳಗಾಗಿ ಈ ಪಾಲಿಕೆಗಳು ರಚನೆಯಾಗಬೇಕು" ಎಂದು ತಿಳಿಸಿದರು.
"ಬೆಂಗಳೂರಿನ ಎಲ್ಲಾ ಫುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ನಾವು ಅವರಿಗೆ ತಳ್ಳುವ ವಾಹನ ನೀಡಲು ಸಿದ್ಧರಿದ್ದೇವೆ. ನಾವು ನಿಗದಿ ಮಾಡುವ ಜಾಗದಲ್ಲಿ ವಾಹನ ಇಟ್ಟುಕೊಂಡು ವ್ಯಾಪಾರ ಮಾಡಬೇಕು. 3,755 ಜನ ವ್ಯಾಪಾರಿಗಳು ವಾಹನ ಬೇಕು ಎಂದು ಕೇಳಿದ್ದಾರೆ" ಎಂದು ಹೇಳಿದರು.