ಬೆಂಗಳೂರು: ಭಾನುವಾರ ವಿಧಾನಸೌಧ ವಾಕಿಂಗ್ ಗೈಡೆಡ್ ಟೂರ್ ವ್ಯವಸ್ಥೆ ಉದ್ಘಾಟನೆಯಾಗಲಿದೆ. ಪ್ರವಾಸಿಗರು ಇನ್ಮುಂದೆ ವಿಧಾನಸೌಧದ ಸೌಂದರ್ಯವನ್ನು ಸನಿಹದಿಂದ ಸಾಕ್ಷೀಕರಿಸಬಹುದಾಗಿದೆ. ವಿಧಾನಸೌಧ ಬೆಂಗಳೂರು ನಗರದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರು ವಿಧಾನಸೌಧಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಪ್ರತಿ ಪ್ರವಾಸಿಗರು ಕಟ್ಟಡದ ಹೊರಭಾಗದಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದು, ಛಾಯಾ ಚಿತ್ರ ತೆಗೆದುಕೊಳ್ಳುತ್ತಾರೆ.
ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕಟ್ಟಡದ ಪಾರಂಪರಿಕತೆ, ಇತಿಹಾಸ ಹಾಗೂ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ದೆಹಲಿಯ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಕಟ್ಟಡಗಳಿಗೆ ಏರ್ಪಡಿಸಿರುವಂತೆ ವಿಧಾನಸೌಧಕ್ಕೂ ಸಹ ವಾಕಿಂಗ್ ಗೈಡೆಡ್ ಟೂರ್ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಾರಿಗೆ ತರಲು ತೀರ್ಮಾನಿಸಿದೆ. ಆ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನಾಳೆ "Walking Guided Tour" ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ವಿಧಾನಸೌಧ ವೀಕ್ಷಿಸಲು ಪ್ರತಿ ಪ್ರವಾಸಿಗರಿಗೆ ಆರಂಭಿಕವಾಗಿ 50 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. 16 ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಿಗೆ ತಲಾ 50 ರೂ ಶುಲ್ಕ ನಿಗದಿ ಪಡಿಸಲಾಗಿದೆ. 15 ಮತ್ತು ಅದಕ್ಕಿಂತ ಸಣ್ಣ ವಯೋಮಾನದವರಿಗೆ ಪ್ರವೇಶ ಉಚಿತವಾಗಿರಲಿದೆ.
ಜೂನ್ 1ರಿಂದ ಅನ್ವಯವಾಗುವಂತೆ ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರುಗಳು ಪ್ರವಾಸಿಗರಿಗೆ ಅವಕಾಶ ಇರಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸ್ಲಾಟ್ನಲ್ಲಿ 30 ಪ್ರವಾಸಿಗರ ತಂಡಕ್ಕೆ ಸೀಮಿತವಾಗಿ ಪ್ರವೇಶಕ್ಕೆ ಅವಕಾಶ ಇರಲಿದೆ. ಆ ರೀತಿ ಅಂದಾಜು ನಿತ್ಯ 300 ಪ್ರವಾಸಿಗರು ಬರುವ ನಿರೀಕ್ಷೆ ಇರಿಸಲಾಗಿದೆ. ವಿಧಾನಸೌಧ ಗೇಟ್ 3 ರಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 1.5 ಕಿ.ಮೀ. ನಡಿಗೆ ಮೂಲಕ ವಿಧಾನಸೌಧದ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ. ಪ್ರತಿ ಪ್ರವಾಸಿ ತಂಡಗಳ ಜೊತೆ ಟೂರ್ ಗೈಡ್ ಹಾಗೂ ಟೂರಿಸ್ಟ್ ಮಿತ್ರ (ಟೂರಿಸ್ಟ್ ಪೊಲೀಸ್) ಇರಲಿದ್ದಾರೆ.