ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಪಿಎಂ ಇ-ಡ್ರೈವ್ ಅಡಿಯಲ್ಲಿ ಮೊದಲ ಹಂತದಲ್ಲಿಯೇ ರಾಷ್ಟ್ರದ ಐದು ಪ್ರಮುಖ ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಈ ಪೈಕಿ ಬೆಂಗಳೂರು ನಗರಕ್ಕೆ 4,500 ಬಸ್ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಎಲೆಕ್ಟ್ರಿಕ್ ಬಸ್ ಹಂಚಿಕೆಯ ಸಂಬಂಧ ಕರ್ನಾಟಕ, ತೆಲಂಗಾಣ, ಗುಜರಾತ್ ಹಾಗೂ ದೆಹಲಿ ರಾಜ್ಯಗಳ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯಲ್ಲಿ ಎಲೆಕ್ಟ್ರಿಕ್ ಬಸ್ಗಳ ಬಳಕೆ ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಪೂರಕ ಮೂಲಸೌಕರ್ಯವನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಮಾಲಿನ್ಯರಹಿತ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಅಗತ್ಯ ಎಂದು ತಿಳಿಸಿದರು. ಬಸ್ ಹಂಚಿಕೆಯಲ್ಲಿ ಬೇಡಿಕೆ, ಜನಸಂಖ್ಯೆ ಹಾಗೂ ಹಳೆಯ ಬಸ್ಗಳ ವಿಲೇವಾರಿ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.
ಕರ್ನಾಟಕದ ಪರವಾಗಿ ಸಭೆಯಲ್ಲಿ ಹಾಜರಿದ್ದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ (BMTC) 7,000 ಎಲೆಕ್ಟ್ರಿಕ್ ಬಸ್ಗಳಿಗೆ ಬೇಡಿಕೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿದ್ದ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಇಷ್ಟೇ ಸಂಖ್ಯೆಯ ಬಸ್ಗಳಿಗೆ ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆ ಹಾಗೂ ಜನಸಂಖ್ಯೆಯನ್ನು ಪರಿಗಣಿಸಿ ಮೊದಲ ಹಂತದಲ್ಲಿಯೇ ಬಿಎಂಟಿಸಿಗೆ 4,500 ಬಸ್ಗಳನ್ನು ಒದಗಿಸುವ ಭರವಸೆ ನೀಡಿದ ಕೇಂದ್ರ ಸಚಿವರು, ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರಕ್ಕೆ ಅತ್ಯಧಿಕ ಬಸ್ಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದರು.
ಉಳಿದಂತೆ ಸೂರತ್ ನಗರ ಸಾರಿಗೆ ಸಂಸ್ಥೆ 600 ಬಸ್ಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಬಸ್ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ. ಅಹಮದಾಬಾದ್ ನಗರಕ್ಕೆ 1,000 ಬಸ್ ಕೇಳಲಾಗಿದ್ದು, ಅಷ್ಟೂ ಬಸ್ಗಳನ್ನೂ ಹಂಚಿಕೆ ಮಾಡುವುದಕ್ಕೆ ಸಚಿವರು ಒಪ್ಪಿಗೆ ನೀಡಿದರು. ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರ ಸಾರಿಗೆ ಸಂಸ್ಥೆ 2,800 ವಿದ್ಯುತ್ ಚಾಲಿತ ಬಸ್ಗಳಿಗೆ ಬೇಡಿಕೆ ಇಟ್ಟಿತ್ತು. ಆ ಪೈಕಿ 2,000 ಬಸ್ಗಳನ್ನು ಹಂಚಿಕೆ ಮಾಡುವ ಬಗ್ಗೆ ಸಚಿವರು ಭರವಸೆ ನೀಡಿದರು.